ಯಲ್ಲಾಪುರ: ತಾಲೂಕಿನ ಹಿಟ್ಟಿನಬೈಲ್ ಕ್ರಾಸ್ ಬಳಿ ನಸುಕಿನಲ್ಲಿ ಬಸ್ ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಮೂವರು ದುರ್ಮರಣ ಹೊಂದಿದ್ದಾರೆ. ಏಳು ಜನ ಗಾಯಗೊಂಡಿದ್ದಾರೆ.
ಶುಕ್ರವಾರ ತಡರಾತ್ರಿ ಹುಬ್ಬಳ್ಳಿಯಿಂದ ಯಲ್ಲಾಪುರ ಮಾರ್ಗವಾಗಿ ಬಸ್ ಸಂಚರಿಸುತ್ತಿತ್ತು. ಈ ವೇಳೆ ಅತಿ ವೇಗದ ಕಾರಣ ನಿಯಂತ್ರಣ ಸಿಗದೇ ಲಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಬಾಗಲಕೋಟ ಜಿಲ್ಲೆಯಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಬಸ್ ನಲ್ಲಿ ಇದ್ದ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ನೀಲವ್ವ, ಜಾಲಿಹಾಳದ ಗಿರಿಜವ್ವ ಮತ್ತು ಇನ್ನೊರ್ವರು ಮೃತಪಟ್ಟಿದ್ದು ವಿವರ ತಿಳಿದು ಬರಬೇಕಿದೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾರಿ ಚಾಲಕ ಹಾಗೂ ಕೆಎಸ್ಆರ್ಟಿಸಿ ಬಸ್ ಚಾಲಕರ ವಿರುದ್ಧ ದೂರು ದಾಖಲಾಗುವ ಸಾಧ್ಯತೆಗಳಿವೆ.