Flash News
Monday, August 31, 2026
Logo Flash News
Monday, August 31, 2026
Logo
ಕಣ್ಣೆದುರೇ ಪ್ರಾಣ ಕಳೆದುಕೊಂಡ ಕರುಳ ಕುಡಿಗಾಗಿ ಕಣ್ಣೀರು ಸುರಿಸಿದ ತಂದೆ ; ಎಳನೀರು ಕೊಯ್ಲು ಮಾಡುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟ ಮಗಳು

ಕಣ್ಣೆದುರೇ ಪ್ರಾಣ ಕಳೆದುಕೊಂಡ ಕರುಳ ಕುಡಿಗಾಗಿ ಕಣ್ಣೀರು ಸುರಿಸಿದ ತಂದೆ ; ಎಳನೀರು ಕೊಯ್ಲು ಮಾಡುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟ ಮಗಳು

August 13, 2025   |   Flash News

ಅಂಕೋಲಾ :  ತಾಲೂಕಿನ ಅಚವೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಚನಗಾರನಲ್ಲಿ ಆಕಸ್ಮಿಕ ದುರಂತ ಒಂದು ಸಂಭವಿಸಿದ್ದು 32ರ ಹರೆಯದ ಯುವತಿ ಓರ್ವಳು ಆಯತಪ್ಪಿ ಬಾವಿಯಲ್ಲಿ ಬಿದ್ದು ಜೀವ ಕಳೆದುಕೊಂಡಿದ್ದಾಳೆ. ವೀಣಾ ಪುಂಡ್ಲಿಕ್ ಗೌಡ ಮೃತ ದುರ್ದೈವಿ.

ಆಗಸ್ಟ್ 12ರಂದು ಮಂಗಳವಾರ ಬೆಳಿಗ್ಗೆ ಮನೆಯಿಂದ ಸ್ವಲ್ಪ ದೂರದಲ್ಲಿ ಇರುವ ತೆಂಗಿನಕಾಯಿ ತೋಟದಿಂದ ಎಳನೀರು ಕೊಯ್ಲು ಮಾಡಿ ತರಲು ಹೋಗಿದ್ದ ತನ್ನ ತಂದೆಗೆ ಸಹಾಯ ಮಾಡಲು ಹೋದಾಗ ಆಕಸ್ಮಿಕವಾಗಿ ಈ ದುರಂತ ಘಟನೆ ಸಂಭವಿಸಿದೆ. ತೆಂಗಿನ ಮರದಿಂದ ತಂದೆ ಪುಂಡ್ಲಿಕ್ ಗೌಡ, ಎಳನೀರನ್ನು ಕೊಯ್ಯುತ್ತಿರುವಾಗ, ಅದು ತೆಂಗಿನಗರಿಯ ಮೇಲಿಂದ ಜಾರಿ ಮೈಮೇಲೆ ಬೀಳಬಹುದೆಂಬ ಆತಂಕದಿಂದಲೋ ಏನೋ ಎಂಬಂತೆ, ಮರದ ಹತ್ತಿರವಿದ್ದ ಮಗಳು ವೀಣಾ ಗೌಡ ಒಮ್ಮೇಲೆ ಹಿಂದೆ ಹೋಗಲು ಹೆಜ್ಜೆ ಇಟ್ಟಾಗ, ಕಾಲು ಜಾರಿ ಅತೀ ಹತ್ತಿರದಲ್ಲಿದ್ದ ನೆಲಮಟ್ಟದ ಬಾವಿಯೊಳಗೆ ಆಕಸ್ಮಿಕವಾಗಿ ಆಯತಪ್ಪಿ ಬಿದ್ದಳು ಎನ್ನಲಾಗಿದೆ. ಈ ಆಕಸ್ಮಿಕ ದುರ್ಘಟನೆಯಿಂದ ಕ್ಷಣಕಾಲ ಆಘಾತಗೊಂಡ ತಂದೆ ಪುಂಡಲೀಕ ಗೌಡ ನಂತರ ಮನೆಯತ್ತ ಓಡಿ ಹೋಗಿ ಅಕ್ಕಪಕ್ಕದವರನ್ನು ಕೂಗಿ ಕರೆದು, ಅವರೆಲ್ಲಾ ತೋಟದತ್ತ ಬಂದು ಬಾವಿಯಲ್ಲಿ ಬಿದ್ದಿದ್ದ  ವೀಣಾಳನ್ನು ಮೇಲೆತ್ತಿದರಾದರೂ, ಆ ವೇಳೆಗಾಗಲೇ ಅವಳ ಉಸಿರು ನಿಂತು ಹೋಗಿತ್ತು ಎನ್ನಲಾಗಿದೆ.

 

ಅಂಕೋಲಾ ಪೋಲೀಸ್ ಠಾಣೆಯ ಸಿಪಿಐ ಚಂದ್ರಶೇಖರ ಮಠಪತಿ, ಪಿ. ಎಸ್ ಐ ಗುರುನಾಥ ಹಾದಿಮನಿ ಮತ್ತು ಸಿಬ್ಬಂದಿಗಳು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕಾನೂನು ಕ್ರಮ ಕೈಗೊಂಡರು. ಘಟನಾ ಸ್ಥಳದಿಂದ  ಮುಖ್ಯ ರಸ್ತೆಗೆ ಸಾಗಲು ಸುತ್ತಿ ಬಳಸಿ ಸಾಗಬೇಕಿರುವುದರಿಂದ, ಹತ್ತಿರದ ದುರ್ಗಮ ಹಾದಿ ಹಾಗೂ ಹಳ್ಳದ ನೀರಿನಲ್ಲಿ ಮೃತ ದೇಹ ಹೊತ್ತು ದೂರದಲ್ಲಿ ನಿಂತಿದ್ದ ಅಂಬುಲೆನ್ಸ್ ವಾಹನದತ್ತ  ಸಾಗಿಸಲು ಸ್ಥಳೀಯರು ಹರಸಾಹಸ ಪಟ್ಟರು. ಸಾಮಾಜಿಕ ಕಾರ್ಯಕರ್ತ ವಿಜಯ ಕುಮಾರ ನಾಯ್ಕ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಮ್ಮ ರಕ್ಷಕ ಆಂಬುಲೆನ್ಸ್ ವಾಹನದ ಮೂಲಕ ಸಾಗಿಸಲು ನೆರವಾದರು. ಮೃತಳ ಕುಟುಂಬಸ್ಥರು, ಸಮಾಜ ಬಾಂಧವರು, ಇತರೆ ಸಮಾಜದ ಪ್ರಮುಖರಾದ ಜಿ.ಎಂ.ಶೆಟ್ಟಿ,ಬಾಲಚಂದ್ರ ಶೆಟ್ಟಿ, ಉಮೇಶ ನಾಯಕ ಮತ್ತಿತರರು ,ಸ್ಥಳೀಯರಿದ್ದರು. ಪದವೀಧರೆಯಾಗಿದ್ದ ವೀಣಾಳು ಕೃಷಿ ಮತ್ತು ತೋಟಗಾರಿಕೆ ಕಸುಬಿನ ಮೂಲಕ ತನ್ನ ಕುಟುಂಬದವರ ಜೀವನಾಧಾರಕ್ಕೆ ನೆರವಾಗಿದ್ದಳು. ಹೆತ್ತ ಮಗಳನ್ನು ಕಳೆದುಕೊಂಡ  ಶೋಕ ಸಾಗರದಲ್ಲಿ ತಂದೆ ತಾಯಿ ರೋಧಿಸುವಂತಾಗಿದ್ದು,ಇತ್ತೀಚಿಗಷ್ಟೇ ರಕ್ಷಾಬಂಧನದ ಪ್ರೀತಿ ಹಂಚಿಕೊಂಡಿದ್ದ ತಂಗಿ ಇಲ್ಲದೇ ಅಣ್ಣ ಸಹ  ದುಃಖ ಪಡುವಂತಾಗಿರುವುದು ಆ ಕುಟುಂಬದ ದುರ್ವಿಧಿಯೇ ಸರಿ. ಒಟ್ಟಾರೆ ಈ ಆಕಸ್ಮಿಕ ದುರಂತ ಸಾವಿನ ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮತ್ತು ಅಧಿಕೃತ ಮಾಹಿತಿಗಳು  ತಿಳಿದು ಬರಬೇಕಿದೆ

Recent Flash News
Logo

ಜನಮಾಧ್ಯಮ ಕನ್ನಡದ ನಿಖರ ಸುದ್ದಿ ಮತ್ತು ತಾಜಾ ಮಾಹಿತಿಯ ವಿಶ್ವಾಸಾರ್ಹ ವೇದಿಕೆ. ಇಲ್ಲಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಬೆಳವಣಿಗೆಗಳೊಂದಿಗೆ ಆರ್ಥಿಕ, ಶೈಕ್ಷಣಿಕ ಮತ್ತು ತಂತ್ರಜ್ಞಾನ ಕ್ಷೇತ್ರಗಳ ವಿಶ್ಲೇಷಿತ ಸುದ್ದಿಗಳನ್ನು ಪಡೆಯಬಹುದು. ಜನರಿಗಾಗಿ ಜನರಿಂದ ನಿರ್ಮಿತವಾದ ಈ ಮಾಧ್ಯಮವು ನಿಖರತೆ, ಪಾರದರ್ಶಕತೆ ಮತ್ತು ತ್ವರಿತ ಮಾಹಿತಿ ನೀಡುವುದರಲ್ಲಿ ತನ್ನ ವಿಶೇಷತೆ ಹೊಂದಿದೆ. ಕನ್ನಡ ಸುದ್ದಿಯನ್ನು ನಿಜವಾದ ಅರ್ಥದಲ್ಲಿ ಅನುಭವಿಸಲು ಮತ್ತು ನವೀಕರಿಸಲ್ಪಟ್ಟ ವರದಿಗಳನ್ನು ತಿಳಿದುಕೊಳ್ಳಲು ಜನಮಾಧ್ಯಮ ನಿಮ್ಮ ನಂಬಲರ್ಹ ಮೂಲ.

Tags

National Crime State Flash News Ankola

© 2026 ಜನಮಾಧ್ಯಮ.. All Rights Reserved.