ಅಂಕೋಲಾ: ತಾಲ್ಲೂಕಿನ ಅಗಸೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಯಂತ್ರಣ ತಪ್ಪಿ ರಸ್ತೆಯಿಂದ ಪಕ್ಕಕ್ಕೆ ಸರಿದಿದ್ದು ಅದೃಷ್ಟವಶಾತ್ ಯಾವುದೇ ಅವಘಡ ಸಂಭವಿಸಿಲ್ಲ.
ಕಾರವಾರದಿಂದ ಅಂಕೋಲಾ ಹುಬ್ಬಳ್ಳಿ ಮಾರ್ಗವಾಗಿ ಕಲಬುರ್ಗಿಗೆ ಹೊರಟಿದ್ದ ಬಸ್ ಮಂಗಳವಾರ ಸಂಜೆ ಚಾಲಕನ ನಿಯಂತ್ರಣಕ್ಕೆ ಸಿಗದೆ ರಸ್ತೆ ಪಕ್ಕದಲ್ಲಿನ ತಗ್ಗಾದ ಪ್ರದೇಶಕ್ಕೆ ಸರಿದಿದೆ. ಮುಂದೆ ಸಮತಟ್ಟಾದ ಜಾಗವಿದ್ದ ಕಾರಣ ಯಾವುದೇ ಅವಘಡ ಸಂಭವಿಸಿಲ್ಲ. ನಿಯಂತ್ರಣ ತಪ್ಪಲು ನಿಖರವಾದ ಕಾರಣ ತಿಳಿದು ಬಂದಿಲ್ಲವಾಗಿದ್ದು ಬ್ರೇಕ್ ಫೇಲ್ ಇಲ್ಲವೇ ಹೊಂಡಗಳನ್ನು ತಪ್ಪಿಸುವಾಗ ಪಕ್ಕಕ್ಕೆ ಸರಿದಿರಬಹುದು ಎಂದು ಬಸ್ನಲ್ಲಿ ಪ್ರಯಾಣಿಸುತ್ತಿದ್ದವರೊಬ್ಬರು ಪ್ರತಿಕ್ರಿಯಿಸಿದರು.
ಕೆಲವು ದಿನಗಳ ಹಿಂದೆ ರಾಷ್ಟ್ರೀಯ ಹೆದ್ದಾರಿಯ ಅಗಸೂರು ಬಳಿ ಖಾಸಗಿ ಬಸ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿನ ಕಿರು ಹಳ್ಳಕ್ಕೆ ಬಿದ್ದಿದ್ದು ಸಾವು ನೋವುಗಳು ಸಂಭವಿಸಿದ್ದವು. ರಾಷ್ಟ್ರೀಯ ಹೆದ್ದಾರಿಯ ಅಂಕೋಲಾ- ಯಲ್ಲಾಪುರ ಮಧ್ಯದ ಮಾರ್ಗದಲ್ಲಿ ಹೊಂಡಗಳ ರಾಶಿಯೇ ಕಂಡು ಬರುತ್ತಿದ್ದು ಸಾರ್ವಜನಿಕರು ನಿರಂತರವಾಗಿ ಸರಿಪಡಿಸುವಂತೆ ಆಗ್ರಹಿಸುತ್ತಲೇ ಬಂದಿದ್ದಾರೆ. ಇದೆ ರಸ್ತೆಯಲ್ಲಿ ನದಿ ನಿರ್ಮಾಣವಾಗಿದೆ ಎನ್ನುವ ರೀತಿಯಲ್ಲಿ ಗಾಳ ಹಾಕುವ ಅಣಕು ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಸದ್ದು ಮಾಡಿತ್ತು.