ಬೆಂಗಳೂರು: ಮಠಾಧಿಪತಿಯಾಗಿದ್ದ ವ್ಯಕ್ತಿಯೊಬ್ಬರ ಪೂರ್ವಾಪರ ಬೆಳಕಿಗೆ ಬರುತ್ತಿದ್ದಂತೆ ಭಕ್ತರು ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಮಠಾಧಿಪತಿ ಪೀಠ ತ್ಯಾಗ ಮಾಡಿದ್ದಾರೆ.
ಒಂದು ವರ್ಷದ ಹಿಂದೆ ಆರಂಭವಾಗಿದ್ದ ಗುಂಡ್ಲುಪೇಟೆಯ ಚೌದಹಳ್ಳಿ ಗ್ರಾಮದ ಗುರು ಮಲ್ಲೇಶ್ವರ ದಾಸೋಹ ಮಠದ ಶಾಖೆಗೆ ಎರಡು ತಿಂಗಳ ಹಿಂದೆ ನಿಜಲಿಂಗ ಸ್ವಾಮಿ ಎಂಬ ಹೆಸರಿನಲ್ಲಿ ಮಠಾಧಿಪತಿ ಪ್ರವಚನ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ತೊಡಗಿದ್ದರು. ಬಸವಕಲ್ಯಾಣದಿಂದ ಬಂದು ಇಲ್ಲಿ ಧಾರ್ಮಿಕ ಸೇವೆಯಲ್ಲಿ ಭಾಗಿಯಾಗಿದ್ದರು. ಇದೇ ಗ್ರಾಮದ ವ್ಯಕ್ತಿಯೊಬ್ಬರಿಗೆ ದೊರೆತ ಆಧಾರ್ ಕಾರ್ಡ್ ಮತ್ತು ಇತರ ದಾಖಲೆಗಳಿಂದ ಮೂಲ ಹೆಸರು ಅಹಮದ್ ನಿಸ್ಸಾರ್ ಬಿನ್ ಮೆಹಬೂಬ್ ಸಾಬ್ ಎಂಬ ಮೂಲ ಹೆಸರು ತಿಳಿದು ಬಂದಿದೆ. ವಿಷಯ ಬೆಳಕಿಗೆ ಬರುತ್ತಿದ್ದಂತೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ವಿಚಾರಣೆ ನಡೆದಿದೆ. ಬಸವ ತತ್ವದಿಂದ ಪ್ರಭಾವಿತನಾಗಿ ಜಂಗಮ ದೀಕ್ಷೆ ಮತ್ತು ವೀರಶೈವ ಮತಕ್ಕೆ ಮತಾಂತರಗೊಂಡಿದ್ದೇನೆ ಎಂದು ಹಾಗೂ ಬಸವ ಪೀಠದ ಮಾತೆ ಒಬ್ಬರಿಂದ ನಿಜಲಿಂಗ ಸ್ವಾಮೀಜಿ ಎಂಬ ನಾಮಕರಣ ಮಾಡಿಕೊಂಡಿರುವ ಕುರಿತು ದಾಖಲೆಗಳನ್ನು ತೋರಿಸಿದ್ದಾರೆ. ಪೂರ್ವಪರ ವಿಚಾರಗಳನ್ನು ಭಕ್ತರೊಂದಿಗೆ ಹಂಚಿಕೊಳ್ಳದೆ ತಪ್ಪು ಮಾಡಿದ್ದು ಮಠವನ್ನು ಬಿಟ್ಟು ಹೋಗುವಂತೆ ಭಕ್ತರು ಆಗ್ರಹಿಸಿದ ಹಿನ್ನೆಲೆಯಲ್ಲಿ ತಮ್ಮ ವಸ್ತುಗಳನ್ನು ಬೈಕ್ ಒಂದರಲ್ಲಿ ತುಂಬಿಸಿಕೊಂಡು ಅಲ್ಲಿಂದ ತೆರಳಿದ್ದಾರೆ.