ಅಂಕೋಲಾ: ಗುಣಮಟ್ಟದ ರಸ್ತೆ ನಿರ್ಮಾಣದ ಭರವಸೆ ನೀಡಿ ಮನೆಯ ಮುಂದಿನ ರಸ್ತೆಯ ಪಕ್ಕದಲ್ಲಿನ ಚರಂಡಿಯ ಸ್ಲ್ಯಾಬ್ ತೆಗೆದು ಎರಡುವರೆ ವರ್ಷ ಕಳೆದರೂ ರಸ್ತೆ ನಿರ್ಮಾಣದ ಸುಳಿವೇ ಇಲ್ಲದಾಗಿದೆ. ಮಳೆಗಾಲದಲ್ಲಿ ರಸ್ತೆಯ ಮಧ್ಯದಲ್ಲಿನ ಚರಂಡಿಯ ನೀರು ಉಕ್ಕಿ ಹರಿದು ಮನೆಗಳ ಆವರಣಕ್ಕೆ ನುಗ್ಗುತಿದ್ದರೂ ಪುರಸಭೆಯಿಂದ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಅಂಕೋಲಾ ಪುರಸಭೆಯ ವಾರ್ಡ್ ನಂಬರ್ - 2 ರಲ್ಲಿನ ಶಿರಕುಳಿ - ಅಸ್ಲಗದ್ದೆಯ ಅಂಬಾರಕೊಡ್ಲಾ ಸಾಗುವ ರಸ್ತೆಯ ಬಲಭಾಗದ ಇಂಜಿನಿಯರ್ ಚಂದ್ರು ಗೌಡ ಮನೆಯ ಮುಂಭಾಗದ ಕಿರು ರಸ್ತೆಯ ದುಸ್ಥಿತಿ ಅಯೋಮಯವಾಗಿದೆ. ಅಂದಾಜು 2 ರಿಂದ 3 ಮೀಟರ್ ಅಗಲವಾದ ರಸ್ತೆ ಇದಾಗಿದ್ದು ಹತ್ತಾರು ಮನೆಗಳು ಹಾಗೆಯೇ ಮುಂದೆ ಶಿರಕುಳಿ ಸಂಪರ್ಕದ ರಸ್ತೆ ಇದಾಗಿದೆ. ರಸ್ತೆಯ ಒಟ್ಟಾರೆ ಅಗಲದಲ್ಲಿ ಅರ್ಧ ಭಾಗದಷ್ಟು ವ್ಯಾಪ್ತಿಯಲ್ಲಿ ಚರಂಡಿ ಮತ್ತು ಇನ್ನರ್ಧ ಭಾಗದಲ್ಲಿ ಕಚ್ಚಾ ರಸ್ತೆ ಸಮಾನಂತರವಾಗಿ ಸಾಗುತ್ತದೆ. ಈ ರಸ್ತೆಯ ಎತ್ತರದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಮತ್ತು ಅಂಕೋಲಾ ಪಟ್ಟಣದ ಪ್ರವೇಶ ಭಾಗದಿಂದ ಪ್ರಮುಖ ರಸ್ತೆಯಿಂದ ಮಳೆಗಾಲದಲ್ಲಿ ನೀರು ಹರಿದು ಬರುತ್ತದೆ. ಮೇಲಿನಿಂದ ವೇಗವಾಗಿ ಹರಿದು ಬರುವ ನೀರು ಪ್ರಸ್ತಾವಿತ ರಸ್ತೆಯ ಮಧ್ಯ ಭಾಗದ ಚರಂಡಿಯ ಮೂಲಕ ಹರಿದು ಹೋಗುವಾಗ ಹೆಚ್ಚಿನ ರಭಸ ಉಂಟಾದಂತೆ ಮನೆಗಳಿಗೆ ನೀರು ನುಗ್ಗಬಾರದು ಎನ್ನುವ ಕಾರಣಕ್ಕೆ ಈ ಹಿಂದೆ ಚರಂಡಿಯ ಮೇಲ್ಭಾಗದಲ್ಲಿ ಸ್ಲ್ಯಾಬ್ ಅಳವಡಿಕೆ ಮಾಡಲಾಗಿತ್ತು. ಈ ಪ್ರದೇಶ ಹಿಂದೆ ಅಲಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವುದರಿಂದ ಸ್ಲ್ಯಾಬ್ ಅಳವಡಿಕೆ ಮತ್ತು ರಸ್ತೆಯನ್ನು ನಿರ್ಮಿಸಲಾಗಿತ್ತು. ಐದು ವರ್ಷಗಳ ಹಿಂದೆ ಅದು ಪುರಸಭೆಯ ವ್ಯಾಪ್ತಿಗೆ ಬಂದಿರುವುದರಿಂದ ಹೊಸದಾಗಿ ಸ್ಲ್ಯಾಬ್ ಅಳವಡಿಕೆ ಮಾಡಿ ಗುಣಮಟ್ಟದ ರಸ್ತೆ ನಿರ್ಮಿಸುವ ಭರವಸೆ ನೀಡಿ ಇರುವ ಸ್ಲ್ಯಾಬ್ ಗಳನ್ನೂ ತೆಗೆದುಹಾಕಲಾಯಿತು.
ಅಪಾಯಕಾರಿ ಸ್ಥಿತಿಯಲ್ಲಿ ಇರುವುದರಿಂದ ರಸ್ತೆ ದುರಸ್ತಿ ಮಾಡಿಸಿ ಎಂದು ಇಲ್ಲಿನ ನಿವಾಸಿಗಳು ಪುರಸಭೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ಮಾಡುತ್ತಲೇ ಬಂದಿದ್ದಾರೆ. ಹಲವು ಬಾರಿ ಅನುದಾನ ಮಂಜೂರಾಗಿದೆ ಎಂದು ಜನಪ್ರತಿನಿಧಿಗಳು ತಿಳಿಸಿದ್ದರೂ ಎನ್ನಲಾಗಿದೆ. ಇಲ್ಲಿ ಮಂಜೂರಾಗಿರುವ ಅನುದಾನವನ್ನು ಬೇರೆಡೆಗೆ ಬಳಕೆ ಮಾಡಿಕೊಂಡಿದ್ದಾರೆ ಎನ್ನುವ ಆರೋಪ ಸ್ಥಳೀಯರಿಂದ ಕೇಳಿ ಬಂದಿದೆ. ಹತ್ತಾರು ಬಾರಿ ಪುರಸಭೆಯ ಅಧಿಕಾರಿಗಳಿಗೆ ವಿನಂತಿಸಿದರು ಪ್ರಯೋಜನವಾಗಿರಲಿಲ್ಲ. ಹಾಗಾಗಿ ತಿಂಗಳ ಹಿಂದೆ ಶಾಸಕರಿಗೂ ಮನವಿ ಮಾಡಿದ್ದಾರೆ ಎನ್ನಲಾಗಿದ್ದು, ಶೀಘ್ರದಲ್ಲಿಯೇ ರಸ್ತೆ ಅವ್ಯವಸ್ಥೆಯ ಸಮಸ್ಯೆಯನ್ನು ಪರಿಹರಿಸಿ ಎಂದು ಶಾಸಕರು ಪುರಸಭೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ರಸ್ತೆಯ ಮಧ್ಯೆ ಭಾಗದಲ್ಲಿಯೇ ತೆರೆದ ಚರಂಡಿ ಇರುವುದರಿಂದ ಹಾಗೂ ಅರ್ಧ ಭಾಗದ ರಸ್ತೆಯೂ ಹಾಳಾಗಿದ್ದ ಪರಿಣಾಮ ಬೈಕ್ ಸಂಚಾರವೂ ಸಾಧ್ಯವಾಗುತ್ತಿಲ್ಲ. ಮಕ್ಕಳು, ಮಹಿಳೆಯರು ಹಾಗೂ ಅಸಹಾಯಕರು ಈ ರಸ್ತೆಯಲ್ಲಿ ಓಡಾಡದ ಪರಿಸ್ಥಿತಿ ಉಂಟಾಗಿದೆ. ರಾತ್ರಿಯ ವೇಳೆಯಂತೂ ಸಂಚರಿಸಲು ಭಯವಾಗುತ್ತದೆ. ತಾತ್ಕಾಲಿಕವಾಗಿ ನಾವೇ ನಮ್ಮ ಮನೆಯ ಮುಂಭಾಗದಲ್ಲಿ ಸ್ಲ್ಯಾಬ್ ಅಳವಡಿಕೆ ಮಾಡಿಕೊಂಡಿದ್ದೇವೆ ಎಂದು ಸ್ಥಳೀಯರಾದ ಈಶ್ವರ ಲಮಾಣಿ, ವಿನಾಯಕ ನಾಯ್ಕ್, ಅಕ್ಷಯ ಅಂಕೋಲೆಕರ್, ಮಾರುತಿ ಮುದ್ಗೇಕರ, ಬಾಲಕೃಷ್ಣ ನಾಯ್ಕ ಮತ್ತಿತರು ಅಳಲು ವ್ಯಕ್ತಪಡಿಸಿದರು.
ಜಲಪಾತದ ರೀತಿಯಲ್ಲಿ ಮಳೆಗಾಲದಲ್ಲಿ ನೀರು ಧಾರಾಕಾರವಾಗಿ ಹರಿಯುತ್ತದೆ. ಮನೆಗಳಿಗೂ ನುಗ್ಗುತ್ತದೆ. ಆದರೆ ಸಂಬಂಧಿಸಿದವರು ಮಾತ್ರ ಕೈಕಟ್ಟಿ ಕುಳಿತಿದ್ದಾರೆ ಎಂಬುದು ಅವರ ಆರೋಪವಾಗಿದೆ.