ಕಾರವಾರ: ವೆಲ್ಡಿಂಗ್ ವೃತ್ತಿಯಲ್ಲಿದ್ದ ಇಬ್ಬರು ಯುವಕರ ನಡುವಿನ ಜಗಳ ತಾರಕ್ಕಕ್ಕೆ ಏರಿದ್ದು ಸಿಟ್ಟಿನಿಂದ ಚಾಕು ಇರಿತಕ್ಕೆ ಕಾರಣವಾಗಿದೆ.
ತಾಲ್ಲೂಕಿನ ನಂದನಗದ್ದ ಅಂಬೇಡ್ಕರ್ ಕಾಲೋನಿ ನಿವಾಸಿ ವೆಲ್ಡರ್ ಸಂಜಯ್ ಸತೀಶ ಮಾಂಗ್ರೇಕರ (20) ಅದೇ ಸ್ಥಳದ ನಿವಾಸಿ ವೆಲ್ಡರ್ ರೋಷನ್ ಪ್ರದೀಪ್ ಹುಲಸ್ವಾರ ನಡುವೆ ಕಾರವಾರ ನದಿವಾಡ ಸಂತೋಸಿ ಮಾತಾ ದೇವಸ್ಥಾನದ ಎದುರಿಗಿರುವ ಮೈದಾನದಲ್ಲಿ ರಾತ್ರಿ ವೇಳೆ ಜಗಳ ನಡೆದಿದೆ. ಈ ನಡುವೆ ತಂಟೆ ತಕರಾರು ತೆಗೆದ ಸಂಜಯ ಸಿಟ್ಟಿನಿಂದ ದೂಡಾಡಿ ಕೊಲೆ ಮಾಡುವ ಉದ್ದೇಶದಿಂದ ಕಿರುಚುತ್ತಾ ನಿನ್ನನ್ನು ಇವತ್ತು ಬಿಡುವುದಿಲ್ಲ ಎಂದು ರೋಷನಗೆ ಜೀವ ಬೆದರಿಕೆ ಒಡ್ಡಿದ್ದಾನೆ. ನಂತರ ಹರಿತವಾದ ಚಾಕು ತೆಗೆದುಕೊಂಡು ರೋಷನನ ಸೊಂಟ ಭಾಗದ ಎಡ ಹೊಟ್ಟೆಗೆ ಇರಿದು ಬಲವಾಗಿ ಗಾಯಗೊಳಿಸಿದ್ದಾನೆ. ಗಾಯದ ತೀವ್ರತೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಎ. ಜೆ ಆಸ್ಪತ್ರೆಗೆ ದಾಖಲಿಸಿ ಆರೋಪಿತನ ವಿರುದ್ಧ ಕ್ರಮ ಕೈಗೊಳ್ಳುವಂತೆ ರೋಷನನ ಸಹೋದರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಜಗಳ ಆರಂಭವಾದದ್ದು ಹೇಗೆ? ಮಧ್ಯರಾತ್ರಿ ಮೈದಾನಕ್ಕೆ ತೆರಳಿದ್ದು ಯಾಕೆ? ಆರೋಪಿ ಮೊದಲೇ ಹಲ್ಲೆ ಮಾಡಲು ನಿರ್ಧರಿಸಿ ಚಾಕು ತಂದಿದ್ದನೇ ಇಲ್ಲವೇ ಮೈದಾನದಲ್ಲಿ ಚಾಕು ಹೇಗೆ ಬಂತು? ಎನ್ನುವ ಪ್ರಶ್ನೆಗಳು ಕೇಳಿ ಬಂದಿದ್ದು ಪೊಲೀಸ್ ತನಿಖೆಯಿಂದ ನಿಜಾಂಶ ತಿಳಿದು ಬರಬೇಕಿದೆ. ಪಿ ಎಸ್ ಐ ಉದ್ದಪ್ಪ ಧರೆಪ್ಪನವರ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.