ಅಂಕೋಲಾ: ರಮಣೀಯ ನೋಟ ಹಾಗೂ ಸುರಕ್ಷಿತ ವಿಹಾರಕ್ಕೆ ಹೆಸರಾಗಿದ್ದ ತಾಲ್ಲೂಕಿನ ಪ್ರಸಿದ್ಧ ವಿಭೂತಿ ಜಲಪಾತ ವೀಕ್ಷಣೆಗೆ ತಾತ್ಕಾಲಿಕವಾಗಿ ನಿರ್ಬಂಧ ವಿಧಿಸಲಾಗಿದೆ. ಮಳೆಗಾಲದ ಹಿನ್ನೆಲೆ ಜೂನ್ 8ರಿಂದ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ಅವಕಾಶವಿಲ್ಲವೆಂದು ತಿಳಿದು ಬಂದಿದೆ. ಗ್ರಾಮ ಅರಣ್ಯ ಸಮಿತಿಯ ನಿರ್ವಹಣೆಯಲ್ಲಿರುವ ಅಂಕೋಲಾ ತಾಲ್ಲೂಕಿನ ಅಚವೆ ಸಮೀಪದ ವಿಭೂತಿ ಫಾಲ್ಸ್ ಇತ್ತೀಚಿನ ವರ್ಷಗಳಲ್ಲಿ ಮುನ್ನೆಲೆಗೆ ಬಂದಿದ್ದು ಸಾವಿರಾರು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿದ್ದರು. ಪುರಾಣ ಪ್ರಸಿದ್ಧ ಸ್ಥಳಗಳಾದ ಯಾಣ ಮತ್ತು ಗೋಕರ್ಣಕ್ಕೆ ಮಲೆನಾಡು ಸಂಪರ್ಕದ ಮಾರ್ಗ ಮಧ್ಯದಲ್ಲಿಯೇ ಇರುವ ಕಾರಣ ಹಾಗೂ ಸಾಮಾಜಿಕ ಜಾಲತಾಣಗಳ ಪ್ರಭಾವದಿಂದಾಗಿ ಇದು ರಾಜ್ಯದ ಪ್ರಮುಖ ಪ್ರವಾಸಿ ಜಲಪಾತಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಈಗ ತಾತ್ಕಾಲಿಕ ಕಡಿವಾಣ ಹಾಕಲಾಗಿದೆ.