ಕಾರವಾರ: ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧೀನದಲ್ಲಿರುವ ಇಲ್ಲಿನ ಸರ್ಕಾರಿ ಬಾಲಕಿಯರ ಬಾಲಮಂದಿರದಲ್ಲಿ ಶನಿವಾರ ಮಧ್ಯಾಹ್ನ ಬಾಲಕಿಯೊಬ್ಬಳು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಗಂಭೀರ ಸ್ಥಿತಿಯಲ್ಲಿರುವ ಬಾಲಕಿಯನ್ನು ತಕ್ಷಣವೇ ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಸ್ತುತ ಆಕೆಗೆ ಎಸ್‌ಐಸಿಯುನಲ್ಲಿ ತುರ್ತು ಚಿಕಿತ್ಸೆ ಮುಂದುವರಿಸಲಾಗಿದೆ.
ಶನಿವಾರ ಸಿಬ್ಬಂದಿಯ ಕಣ್ಣು ತಪ್ಪಿಸಿ ಬಾಲಮಂದಿರದ ಮೇಲಿನ ಮಹಡಿಯ ಕೋಣೆಗೆ ತೆರಳಿದ ಬಾಲಕಿ ಈ ಕೃತ್ಯಕ್ಕೆ ಮುಂದಾಗಿದ್ದಾಳೆ. ಆದರೆ ಸಮಯೋಚಿತವಾಗಿ ಗಮನಿಸಿದ ಸಿಬ್ಬಂದಿ ಕೂಡಲೇ ಕಾರ್ಯಪ್ರವೃತ್ತರಾಗಿ ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ರವಾನಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ ಬಾಲಕಿಯು ಕಳೆದ ಆಗಸ್ಟ್ ತಿಂಗಳಲ್ಲಿ ಪ್ರಕರಣವೊಂದರ ಸಂತ್ರಸ್ತೆಯಾಗಿ ಬಾಲಮಂದಿರ ಸೇರಿದ್ದಳು. ಈ ಘಟನೆಯ ನಂತರ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಆಕೆ, ಆಗಾಗ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳುತ್ತಿದ್ದಳು ಎನ್ನಲಾಗಿದೆ.
ಇತ್ತೀಚೆಗಷ್ಟೇ ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡದ ಮನೋವೈದ್ಯಕೀಯ ಸಂಸ್ಥೆಗೆ ಕರೆದೊಯ್ದು ಕೌನ್ಸೆಲಿಂಗ್ ಕೊಡಿಸಲಾಗಿತ್ತು. ಆದರೂ ಆಕೆಯ ವರ್ತನೆಯಲ್ಲಿ ಬದಲಾವಣೆ ಕಂಡುಬಂದಿರಲಿಲ್ಲ. ನಗರದ ಸರ್ಕಾರಿ ಪ್ರೌಢಶಾಲೆಯೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಈಕೆ, ಕಳೆದ ಎರಡು ವಾರಗಳಿಂದ ಶಾಲೆಗೆ ಹೋಗದೆ ಬಾಲಮಂದಿರದಲ್ಲಿಯೇ ಉಳಿದುಕೊಂಡಿದ್ದಳು. ಪ್ರಸ್ತುತ ಈ ಬಾಲಮಂದಿರದಲ್ಲಿ ವಿವಿಧ ಪ್ರಕರಣಗಳ 20ಕ್ಕೂ ಹೆಚ್ಚು ಸಂತ್ರಸ್ತ ಬಾಲಕಿಯರಿದ್ದು, ಅವರ ರಕ್ಷಣೆಗಾಗಿ 10 ಮಂದಿ ಸಿಬ್ಬಂದಿ ನಿಯೋಜನೆಗೊಂಡಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ಬಾಲಮಂದಿರದ ಸುರಕ್ಷತೆ ಹಾಗೂ ಸಂತ್ರಸ್ತ ಮಕ್ಕಳ ಮಾನಸಿಕ ಆರೋಗ್ಯ ಆರೈಕೆಯ ಬಗ್ಗೆ ಅಧಿಕಾರಿಗಳ ಮಟ್ಟದಲ್ಲಿ ಗಂಭೀರ ಚರ್ಚೆಗಳು ಆರಂಭವಾಗಿವೆ.