ಶಿರಸಿ: ತಾಲೂಕಿನ ಸಿರ್ಸಿಮಕ್ಕಿ ಬಳಿ ಕಾರು ಪಲ್ಟಿಯಾಗಿ ಬಾಲಕ ಸ್ಥಳದಲ್ಲಿಯೇ ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ನಡೆದಿದೆ. ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತವಾಗಿದ್ದು ಅಮಾನುಲ್ಲಾ ಸೌದಾಗರ (10) ಮೃತಪಟ್ಟ ಬಾಲಕನಾಗಿದ್ದಾನೆ. ಕಾರಿನಲ್ಲಿ ಒಂದೇ ಕುಟುಂಬದ ಐವರು ಸಂಚರಿಸುತ್ತಿದ್ದರು. ಶಿರಸಿ ಕಸ್ತೂರಬಾ ನಗರದ ನಿವಾಸಿಗರು. ಲಿಯಾಖತ್ ಮಹಮ್ಮದ್ ಅಲಿ ಸೌದಾಗರ, ಶಿರಿನ್ ಬಾನು ಸೇರಿದಂತೆ ಇನ್ನಿರ್ವರಿಗೆ ಗಾಯವಾಗಿದೆ. ಗಾಯಗೊಂಡ ಲಿಯಾಖತ್ ಭಟ್ಕಳ ತಾಲೂಕಿನ ಶಿರೂರಿನ ದಾರೂಲ್ ಸುಲ್ ಶಾಲೆಯ ಶಿಕ್ಷಕ. ರಜೆಯ ಕಾರಣದಿಂದಾಗಿ ಲಿಯಾಖತ್ ತಮ್ಮ ಕುಟುಂಬ ಸಮೇತರಾಗಿ ಕಾರಿನಲ್ಲಿ ಶಿರಸಿಗೆ ಬರುತ್ತಿದ್ದ ಸಂದರ್ಭದಲ್ಲಿ ಘಟನೆ ಸಂಭವಿಸಿದೆ. ಶಿರಸಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.