Flash News
Tuesday, September 01, 2026
Logo Flash News
Tuesday, September 01, 2026
Logo
ಸಂದ್ಕಣಿ ಗ್ರಾಮದಲ್ಲಿ ನಾಗವರ್ಮರಸನ ಕಾಲದ ವೀರಗಲ್ಲು ಪತ್ತೆ

ಸಂದ್ಕಣಿ ಗ್ರಾಮದಲ್ಲಿ ನಾಗವರ್ಮರಸನ ಕಾಲದ ವೀರಗಲ್ಲು ಪತ್ತೆ

February 02, 2026   |   Flash News

ಅಂಕೋಲಾ: ತಾಲೂಕಿನ ಅಗಸೂರು ಪಂಚಾಯತ ವ್ಯಾಪ್ತಿಯ ಸಂದ್ಕಣಿ ಗ್ರಾಮದಲ್ಲಿ ಜಿಲ್ಲೆಯ ಇತಿಹಾಸ ಸಂಶೋಧಕ ಶ್ಯಾಮಸುಂದರ ಗೌಡ, ಮಾರುಗದ್ದೆ ಶಾಲೆಯ ಶಿಕ್ಷಕರಾದ ದಿವಾಕರ ದೇವನ್ಮನೆ, ನೀಲಕಂಠ ಗೌಡ ಹಾಗೂ ಸ್ಥಳೀಯರಾದ ಕೇಶವ ಭಂಡಾರಿ ಅವರುಗಳು ಕೈಗೊಂಡ ಕ್ಷೇತ್ರಕಾರ್ಯದಲ್ಲಿ ಅಲ್ಲಿನ ನಿರ್ಜನ ಅರಣ್ಯ ಪ್ರದೇಶದಲ್ಲಿ ಹನ್ನೆರಡನೇ ಶತಮಾನದ ಆರಂಭದ ಅವಧಿಗೆ ಸೇರಿದ ನಾಗವರ್ಮರಸನ ಕಾಲದ ವೀರಗಲ್ಲೊಂದನ್ನು ಪತ್ತೆ ಮಾಡಿದ್ದಾರೆ.

ಈ ಕುರಿತು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಗೌಡರು ʻಸಂದ್ಕಣಿಯಲ್ಲಿ ದೊರೆತ ವೀರಗಲ್ಲು ಐದು ಅಡಿ ಎತ್ತರವಿದ್ದು 22 ಅಂಗುಲ ಅಗಲವಾಗಿದೆ. ಒಟ್ಟು ಏಳು ಪಟ್ಟಿಕೆಗಳಲ್ಲಿ ಇದನ್ನು ಚಿತ್ರಿಸಲಾಗಿದ್ದು ಇದರಲ್ಲಿ ಯಾವುದೇ ಬರವಣಿಗೆ ಇಲ್ಲ. ಇದೊಂದು ಶಾಸನ ರಹಿತ ವೀರಗಲ್ಲಾಗಿದೆ ಎಂದು ತಿಳಿಸಿದರು. ನೆಲದ ಕಡೆಯಿಂದ ಮೊದಲನೇ ಪಟ್ಟಿಕೆಯಲ್ಲಿ ಖಡ್ಗಯುದ್ಧದ ಚಿತ್ರವನ್ನು, ಎರಡನೇ ಪಟ್ಟಿಕೆಯಲ್ಲಿ ತಾಳ, ಜಾಗಟೆ ಮೃದಂಗ ಇತ್ಯಾದಿಗಳನ್ನು ಬಾರಿಸುತ್ತಿರುವ ವಾದ್ಯವೃಂದದವರನ್ನು, ಮೂರನೇ ಪಟ್ಟಿಕೆಯಲ್ಲಿ ಬಿಲ್ಯುದ್ಧದ ಚಿತ್ರವನ್ನು ತೋರಿಸಲಾಗಿದೆ. ನಾಲ್ಕನೇ ಪಟ್ಟಿಕೆಯಲ್ಲಿ ವಾನರ ಮತ್ತು ದಾನವರ ನಡುವೆ ಯುದ್ಧ ನಡೆಯುತ್ತಿರುವಂತೆ ಚಿತ್ರಿಸಲಾಗಿದೆ. ಐದನೆಯ ಪಟ್ಟಿಕೆಯ ಅರ್ಧಭಾಗದಲ್ಲಿ ರತಿಕ್ರೀಡಾ ನಿರತ ದಂಪತಿ ಶಿಲ್ಪವನ್ನು ಇನ್ನರ್ಧ ಭಾಗದಲ್ಲಿ ಮಂಟಪ ಒಂದರಲ್ಲಿ ವಾನರ ದಂಪತಿಗಳಿಬ್ಬರು ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಿರುವಂತೆಯು ಚಿತ್ರಿಸಲಾಗಿದೆ. ವೀರಗಲ್ಲೊಂದರಲ್ಲಿ ವಾನರರು ಶಿವಲಿಂಗಕ್ಕೆ ಅಭಿಷೇಕ ಮಾಡುವ ಶಿಲ್ಪ ಈ ಹಿಂದೆ ಬೇರೆಲ್ಲಿಯೂ ದೊರೆತ ಉದಾಹರಣೆಗಳಿಲ್ಲ. ಇದೊಂದು ಅಪರೂಪದ ಶಿಲ್ಪವಾಗಿದೆ.  ಅದರ ಮೇಲಿನ ಆರನೆಯ ಪಟ್ಟಿಕೆಯಲ್ಲಿ ವೀರನೊಬ್ಬ ಕುದುರೆ ಸವಾರರು ಮತ್ತು ಕಾಲಾಳುಗಳೊಂದಿಗೆ ಏಕಕಾಲದಲ್ಲಿ ಹೋರಾಡುತ್ತಿದ್ದು ವೀರನ ಕಾಲ ಕೆಳಗೆ ಒಂದಿಷ್ಟು ಜನ ಸೈನಿಕರು ಸತ್ತು ಬಿದ್ದಂತೆ ಚಿತ್ರಿಸಲಾಗಿದೆ. “ಹಲವಾಳು ಕುದುರೆಯಂ ಕಂಡು ತಾಗಿ ತಳ್ತಿಱಿದು ಸುರಲೋಕ ಪ್ರಾತ್ಪನಾದ” ಎನ್ನುವ ಶಾಸನಗಳಲ್ಲಿ ಬರುವ ಮಾತಿಗೆ ಪೂರ್ತಿಯಾಗಿ ಒಪ್ಪುವಂತೆ ಈ ಪಟ್ಟಿಕೆಯನ್ನು ಕೆತ್ತಲಾಗಿದೆ. ಎಲ್ಲಕ್ಕಿಂತ ಮೇಲಿನ 7ನೇ ಪಟ್ಟಿಕೆಯಲ್ಲಿ ಆನೆಗಳಿಂದ ಅಭಿಷೇಕಗೊಳ್ಳುತ್ತಿರುವ ಲಕ್ಷ್ಮಿಯ ಉಬ್ಬು ಚಿತ್ರವಿದೆ. ಅಭಿಷೇಕ ಲಕ್ಷ್ಮೀಯ ಮೇಲ್ಭಾಗದಲ್ಲಿ ಕೀರ್ತಿ ಮುಖವನ್ನು ಚಿತ್ರಿಸಲಾಗಿದೆ. ಮಕರ ಪಟ್ಟಿಕೆಗಳಿಂದ ಅಲಂಕೃತವಾದ ಲಲಾಟದ ಪ್ರಭಾವಳಿಯಲ್ಲಿ ಕದಂಬರ ಲಾಂಛನದ ಮಾದರಿಯ ಸಿಂಹ ಚಿತ್ರವನ್ನು ಚಿತ್ರಿಸಲಾಗಿದ್ದು, ಇದು ಆ ಕಾಲದಲ್ಲಿ ಕದಂಬರ ಆಡಳಿತ ಇಲ್ಲದೇ ಇದ್ದರೂ ಆ ವಂಶಕ್ಕೆ ಸೇರಿದ ಅಧಿಕಾರಿ ವರ್ಗ ಇಲ್ಲಿತ್ತು ಅನ್ನುವುದನ್ನು ಸೂಚ್ಯವಾಗಿ ತಿಳಿಸುತ್ತದೆʼ ಎಂದು ವಿವರಿಸಿದರು.

ನಾಗವರ್ಮರಸ ಸಾಮಾನ್ಯ ಶಕ 1070 ರಿಂದ 1113 ರವರೆಗೆ ಸುಮಾರು 43 ವರ್ಷಗಳವರೆಗೆ ʻಗೋಕರ್ಣಪುರಾಧೀಶ್ವರʼ ಎಂಬ ಬಿರುದನ್ನು ಧರಿಸಿ ಅಂಕೋಲಾ, ಕುಮಟಾ, ಹೊನ್ನಾವರ, ಸಿದ್ದಾಪುರ ತಾಲೂಕಿನ ಭಾಗಗಳನ್ನು ಅಂದರೆ ಪ್ರಾಚೀನ ಸಂಪೂರ್ಣ ಹೈವೆಐನೂರು ಮತ್ತು ಕೊಂಕಣ ಒಂಭೈನೂರರ ದಕ್ಷಿಣ ಭಾಗಗಳನ್ನು ಆಳಿದ ಒಬ್ಬ ಅರಸ. ಈ ಅರಸನಿಗೆ ಸೇರಿದ 12 ಶಾಸನಗಳು ಈವರೆಗೂ ಲಭ್ಯವಾಗಿವೆ. 

Recent Flash News
Logo

ಜನಮಾಧ್ಯಮ ಕನ್ನಡದ ನಿಖರ ಸುದ್ದಿ ಮತ್ತು ತಾಜಾ ಮಾಹಿತಿಯ ವಿಶ್ವಾಸಾರ್ಹ ವೇದಿಕೆ. ಇಲ್ಲಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಬೆಳವಣಿಗೆಗಳೊಂದಿಗೆ ಆರ್ಥಿಕ, ಶೈಕ್ಷಣಿಕ ಮತ್ತು ತಂತ್ರಜ್ಞಾನ ಕ್ಷೇತ್ರಗಳ ವಿಶ್ಲೇಷಿತ ಸುದ್ದಿಗಳನ್ನು ಪಡೆಯಬಹುದು. ಜನರಿಗಾಗಿ ಜನರಿಂದ ನಿರ್ಮಿತವಾದ ಈ ಮಾಧ್ಯಮವು ನಿಖರತೆ, ಪಾರದರ್ಶಕತೆ ಮತ್ತು ತ್ವರಿತ ಮಾಹಿತಿ ನೀಡುವುದರಲ್ಲಿ ತನ್ನ ವಿಶೇಷತೆ ಹೊಂದಿದೆ. ಕನ್ನಡ ಸುದ್ದಿಯನ್ನು ನಿಜವಾದ ಅರ್ಥದಲ್ಲಿ ಅನುಭವಿಸಲು ಮತ್ತು ನವೀಕರಿಸಲ್ಪಟ್ಟ ವರದಿಗಳನ್ನು ತಿಳಿದುಕೊಳ್ಳಲು ಜನಮಾಧ್ಯಮ ನಿಮ್ಮ ನಂಬಲರ್ಹ ಮೂಲ.

Tags

National Crime State Flash News Ankola

© 2026 ಜನಮಾಧ್ಯಮ.. All Rights Reserved.