ಗೋಕರ್ಣ : ಇಲ್ಲಿನ ಮುಖ್ಯ ಬೀಚ್ ಸಮೀಪದ ರೆಸ್ಟೋರೆಂಟ್ ಹಿಂಬದಿಯ ನಿವಾಸಿಗಳು ಅನಾಗರಿಕವಾಗಿ ನಾಯಿಗೆ ಹೊಡೆದು ಗಂಭೀರ ಗಾಯಗೊಳಿಸಿದ್ದಾರೆ ಎಂದು ಆರೋಪಿಸಿ ವಿದೇಶಿ ಮಹಿಳೆ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿದ್ದಾರೆ. ವೃತ್ತಿಯಲ್ಲಿ ಪತ್ರಕರ್ತರಾಗಿದ್ದು ಐರ್ಲೆಂಡಿನ ರಾಷ್ಟ್ರೀಯ ಪತ್ರಿಕೆಗೆ ಲೇಖನ ಬರೆಯುತ್ತಿರುವ ಯವೊನ್ನೆ ಮೆರಿ ಮೋರನ್ ಎಂಬ ಮಹಿಳೆಯೇ ದೂರು ದಾಖಲಿಸಿದವರಾಗಿದ್ದಾರೆ. ನಾಯಿಗೆ ಅನಾಗರಿಕವಾಗಿ ಹೊಡೆದವರ ಮೇಲೆ ಕ್ರಮ ಜರುಗಿಸುವಂತೆ ದೂರಿನಲ್ಲಿ ಆಗ್ರಹಿಸಿದ್ದಾಳೆ. ಗಂಭೀರ ಗಾಯಗೊಂಡ ನಾಯಿಗೆ ಗೋವಾ ರಾಜ್ಯದ ಕಾಣಕೋಣದಲ್ಲಿರುವ ಪ್ರಾಣಿ ಸಂರಕ್ಷಣಾ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದ ಸಾವಿರಾರು ರೂಪಾಯಿ ಖರ್ಚಾಗಿದೆ. ಮನೆಯವರು ಕೋಳಿ ಸಾಕಿಕೊಂಡಿದ್ದಾರೆ. ಕೋಳಿ ತಿನ್ನಲು ನಾಯಿ ಬರುತ್ತದೆ ಎಂಬ ಕಾರಣದಿಂದ ಮಾರಣಾಂತಿಕವಾಗಿ ಹೊಡೆಯುವುದು ಸರಿಯಲ್ಲ ಅವರ ಮೇಲೆ ಕಠಿಣ ಕ್ರಮ ಜರುಗಿಸುವಂತೆ ದೂರಿನಲ್ಲಿ ತಿಳಿಸಿದ್ದಾರೆ.