ಭಟ್ಕಳ: ಮತ್ಸ್ಯಗಂಧ ರೈಲಿನಲ್ಲಿ ಕುಟುಂಬಸ್ಥರೊಂದಿಗೆ ಪ್ರಯಾಣಿಸುತ್ತಿದ್ದಾಗ ಅಂದಾಜು 46 ಲಕ್ಷದ ಚಿನ್ನಾಭರಣ ಮತ್ತು ನಗದು ದೋಚಿಕೊಂಡು ಹೋಗಿರುವ ಘಟನೆ ನಡೆದಿದೆ. ಮಹಾರಾಷ್ಟ್ರ ಮೂಲದ ರೋಸ್ಲಿ ಸಾಲಿನ್ಸ್ ಎನ್ನುವವರು ಡಿಸೆಂಬರ್ 26ರಂದು ಮಧ್ಯಾಹ್ನ 3 ಗಂಟೆಗೆ ಮತ್ಸ್ಯಗಂಧ ರೈಲಿನಲ್ಲಿ ತಮ್ಮ ಮಗಳು, ಗಂಡ ಮತ್ತು ಮೊಮ್ಮಗಳೊಂದಿಗೆ ಪ್ರಯಾಣಿಸುತ್ತಿದ್ದರು. ಒಡವೆಗಳಿದ್ದ ವ್ಯಾನಿಟಿ ಬ್ಯಾಗ್, ಬಟ್ಟೆಗಳಿದ್ದ ಹ್ಯಾಂಡ್ ಬ್ಯಾಗ್ ಮತ್ತು ಸೂಟ್ಕೇಸ್ ನೊಂದಿಗೆ ಅವರು ಉಡುಪಿಗೆ ಪ್ರಯಾಣಿಸುತ್ತಿದ್ದರು. ರೋಸ್ಲಿ ಬಂಗಾರದ ಆಭರಣಗಳಿದ್ದ ವ್ಯಾನಿಟಿ ಬ್ಯಾಗ್ ಅನ್ನು ತಮ್ಮ ತಲೆಯ ಬಳಿ ಇಟ್ಟುಕೊಂಡು ರಾತ್ರಿಯ ವೇಳೆ ನಿದ್ರಿಸಿದ್ದಾರೆ. ಡಿಸೆಂಬರ್ 27ರ ಮುಂಜಾನೆ ರೈಲು ಮುರುಡೇಶ್ವರ ರೈಲ್ವೆ ನಿಲ್ದಾಣದಕ್ಕೆ ಬರುವ ವೇಳೆ ಹಲ್ಲುಜ್ಜಲು ಪರಿಕರಗಳನ್ನು ತೆಗೆಯುವಾಗ ತಲೆಯ ಬಳಿ ಇದ್ದ ವ್ಯಾನಿಟಿ ಬ್ಯಾಗ್ ರೈಲ್ವೇ ಟೀ ಟೇಬಲ್ ಬಳಿ ಬಿದ್ದಿದ್ದು ಅದರಲ್ಲಿನ 45,80,000 ಮೌಲ್ಯದ 408 ಗ್ರಾಂ ಚಿನ್ನದ ಆಭರಣಗಳು ಮತ್ತು 15000 ರೂಪಾಯಿ ನಗದು ಕಳ್ಳತನವಾಗಿರುವ ಕುರಿತು ಗಮನಕ್ಕೆ ಬಂದಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.