ಅಂಕೋಲಾ: ಸ್ವಾತಂತ್ರ ಹೋರಾಟದ ಕಾರಣದಿಂದಲೇ ಅಂಕೋಲಾ ತಾಲೂಕು ಇತಿಹಾಸದ ಪುಟಗಳಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡಿದೆ. ಇಲ್ಲಿನ ಉಪ್ಪಿನ ಸತ್ಯಾಗ್ರಹ, ಕರ ನಿರಾಕರಣೆ ಚಳುವಳಿ ಮತ್ತಿತರ ವಿಭಿನ್ನ ಹೋರಾಟಗಳ ಕಾರಣದಿಂದಾಗಿ ಅಂಕೋಲಾವನ್ನು ಕರ್ನಾಟಕದ ಬಾರ್ಡೋಲಿ ಎಂದು ಕರೆಯಲಾಗುತ್ತದೆ. ಇದೇ ಹೆಸರು ಇಂದಿಗೂ ಜನಮಾನಸದಲ್ಲಿ ರೋಮಾಂಚನ ಉಂಟುಮಾಡುತ್ತದೆ. ರಾಷ್ಟ್ರೀಯ ಹೆದ್ದಾರಿಯಿಂದ ಅಂಕೋಲಾ ಪಟ್ಟಣವನ್ನು ಪ್ರವೇಶಿಸಲು ದಿನಕರ ದೇಸಾಯಿ ಮಾರ್ಗದ ಆರಂಭದಲ್ಲಿ ಪುರಸಭೆಯ ವತಿಯಿಂದ ಸ್ವಾಗತ ಕಮಾನು ನಿರ್ಮಿಸಲಾಗಿದೆ. ಅದರಲ್ಲಿ ಅಂಕೋಲಾ ಪುರಸಭೆ, ಕರ್ನಾಟಕದ ಬಾರ್ಡೋಲಿ ಅಂಕೋಲಾ ನಗರಕ್ಕೆ ಸ್ವಾಗತ ಮತ್ತು ಹಿಂಬದಿಯಲ್ಲಿ ಶುಭವಿದಾಯ ಎನ್ನುವ ನಾಮಫಲಕವನ್ನು ಅಳವಡಿಕೆ ಮಾಡಲಾಗಿದೆ. ವಿದಾಯದ ಅಂದರೆ ಪಟ್ಟಣದಿಂದ ಹೊರಹೋಗುವಾಗ ಕಂಡುಬರುವ ನಾಮಫಲಕದಲ್ಲಿ ಕರ್ನಾಟಕ ಎನ್ನುವ ಶಬ್ದವು ಮುರಿದು ಕಳಚಿ ಬಿದ್ದಿದೆ. ನಾಮಫಲಕ ಅವ್ಯವಸ್ಥಿತಗೊಂಡು ಹಲವು ದಿನಗಳು ಕಳೆದರೂ ಸಂಬಂಧಿಸಿದ ಇಲಾಖೆಗಳು ಮಾತ್ರ ಗಮನಿಸಿಲ್ಲವೇ ಎನ್ನುವ ಆಕ್ಷೇಪಗಳು ಕೇಳಿಬಂದಿವೆ. ಈ ಹಿಂದೆಯೂ ಒಮ್ಮೆ ಇದೇ ರೀತಿ ನಾಮಫಲಕದಲ್ಲಿ ಅಕ್ಷರಗಳು ಕಳಚಿ ಬಿದ್ದಿದ್ದು ಅದನ್ನು ಸರಿಪಡಿಸಲಾಗಿತ್ತು. ಇದೇ ಮಾರ್ಗದ ಮೂಲಕ ನಿತ್ಯವೂ ಸಾವಿರಾರು ವಾಹನಗಳು ಸಂಚರಿಸುವುದರಿಂದ ಕೇವಲ ಬಾರ್ಡೋಲಿ ಅಂಕೋಲಾ ನಗರಕ್ಕೆ ಶುಭವಿದಾಯ ಎನ್ನುವ ನಾಮಫಲಕವನ್ನು ಮಾತ್ರ ನೋಡಿ ಕರ್ನಾಟಕ ಇಲ್ಲದೇ ಇರುವುದು ಆಭಾಸವನ್ನು ಉಂಟುಮಾಡಿದಂತಿದೆ. ಹಾಗಾಗಿ ಸಂಬಂಧಿಸಿದವರು ಇದರ ದುರಸ್ತಿಗೆ ಇಲ್ಲವೇ ಹೊಸ ನಾಮಫಲಕ ಅಳವಡಿಕೆಗೆ ಕ್ರಮ ಕೈಗೊಳ್ಳಬೇಕಿದೆ.