ಕಾರವಾರ: ಪುರಾಣ ಪ್ರಸಿದ್ಧ ಶ್ರೀ ನರಸಿಂಹ ದೇವರ ವಾರ್ಷಿಕ ಜಾತ್ರಾ ಮಹೋತ್ಸವವು ನಾಳೆ ಕೂರ್ಮಗಡ ದ್ವೀಪದಲ್ಲಿ ಜರುಗಲಿದೆ. ಕಾರವಾರದಿಂದ ಅಂದಾಜು 5ಕಿಲೋಮೀಟರ್ ದೂರದ ಅರಬ್ಬೀ ಸಮುದ್ರದ ನಡುವಿನ ಆಮೆ(ಕೂರ್ಮ)ಯಾಕಾರದ ದ್ವೀಪ(ಗಡ)ದ ಬೆಟ್ಟದ ಮೇಲೆ ನರಸಿಂಹ ದೇವಾಲಯವಿದೆ. ಪ್ರತಿ ವರ್ಷ ಪುಷ್ಯ ಮಾಸದಲ್ಲಿ ಇಲ್ಲಿ ನರಸಿಂಹ ದೇವರ ಜಾತ್ರೆ ನಡೆಯುವುದು ವಾಡಿಕೆ. ದ್ವೀಪವಾಗಿರುವುದರಿಂದ ದೋಣಿ ಮತ್ತು ಬೋಟ್ ಗಳ ಮೂಲಕವೇ ಸಾಗಬೇಕು. ಜಾತ್ರೆಯ ದಿನ ಸಾವಿರಾರು ಭಕ್ತರು ರಾಜ್ಯದ ಮೂಲೆ ಮೂಲೆಗಳಿಂದ ಇಲ್ಲಿಗೆ ಬಂದು ಹರಕೆ, ಬೇಡಿಕೆ ಸಲ್ಲಿಸುತ್ತಾರೆ.
ಭಕ್ತರ ಸುರಕ್ಷತಾ ದೃಷ್ಟಿಯಿಂದ ಪ್ರತಿ ವರ್ಷದಂತೆ 10 ವರ್ಷಕ್ಕಿಂತ ಕಡಿಮೆ ಮತ್ತು 70ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನವರಿಗೆ ಹಾಗೂ ಮದ್ಯಪಾನ ಮಾಡಿದವರಿಗೆ ದ್ವೀಪಕ್ಕೆ ತೆರಳುವುದನ್ನು ನಿಷೇಧಿಸಲಾಗಿದೆ. ದ್ವೀಪಕ್ಕೆ ತೆರಳುವ ಪ್ರತಿಯೊಬ್ಬರು ಜೀವ ರಕ್ಷಾ ಕವಚ ಧರಿಸಿ ದೋಣಿ ಹತ್ತುವುದನ್ನು ಕಡ್ಡಾಯಗೊಳಿಸಲಾಗಿದ್ದು ಇದನ್ನು ಪ್ರತಿಯೊಬ್ಬರು ಪಾಲಿಸಿ ಆಡಳಿತಕ್ಕೆ ಸಹಕರಿಸುವಂತೆ ಕಾರವಾರ ತಹಸೀಲ್ದಾರ್ ಎನ್.ಎಫ್. ನರೋನ್ಹಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.