ಅಂಕೋಲಾ: ಡಿಸೆಂಬರ್ 31ರ ಮಧ್ಯರಾತ್ರಿಯಿಂದ ಜನವರಿ 1ರ ನಸುಕಿನವರೆಗೆ ಹೊಸ ವರ್ಷದ ಸಂಭ್ರಮಾಚರಣೆ ಜೋರಾಗಿತ್ತು. ಈ ನಡುವೆ ಸಂಭ್ರಮಾಚರಣೆ ಮುಗಿಸಿ ಹೊರಡುವಾಗ ಆಕಸ್ಮಿಕ ಅಪಘಾತ ಸಂಭವಿಸಿ ಇಬ್ಬರೂ ಯುವಕರು ಗಂಭೀರವಾಗಿ ಗಾಯಗೊಂಡ ಘಟನೆ ತಾಲ್ಲೂಕಿನ ಮಂಜಗುಣಿಯ ಸೇತುವೆ ಬಳಿ ನಡೆದಿದೆ.
ಅಂಕೋಲಾ ಮೂಲದ ಇಬ್ಬರು ಯುವಕರು ಸ್ನೇಹಿತರೊಂದಿಗೆ ಗೋಕರ್ಣ ಭಾಗಕ್ಕೆ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಗಂಗಾವಳಿ - ಮಂಜಗುಣಿ ಸೇತುವೆ ಮಾರ್ಗವಾಗಿ ಅಂಕೋಲಾದತ್ತ ಬೈಕ್ ನಲ್ಲಿ ಬರುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿ ಸೇತುವೆಯ ಅಂಚಿಗೆ ಡಿಕ್ಕಿ ಹೊಡೆದು ಕೆಳಭಾಗಕ್ಕೆ ಬಿದ್ದಿದ್ದಾರೆ ಎನ್ನಲಾಗಿದೆ. ಸ್ಥಳದಲ್ಲಿಯೇ ಇದ್ದ ಪೊಲೀಸರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲು ಕ್ರಮ ಕೈಗೊಂಡರು. ಡಿಕ್ಕಿಯ ರಭಸಕ್ಕೆ ಹಾಗೂ ಸೇತುವೆಯಿಂದ ಕೆಳಗೆ ಬಿದ್ದ ಪರಿಣಾಮ ಯುವಕರ ಸ್ಥಿತಿ ಗಂಭೀರವಾಗಿದ್ದು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಪಿಎಸ್ಐ ಗುರುನಾಥ ಹಾದಿಮನಿ ನೇತೃತ್ವದಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಹಿನ್ನಲೆ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.