ಅಂಕೋಲಾ: ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವವು ಪಟ್ಟಣದ ಸ್ವಾತಂತ್ರ್ಯ ಸಂಗ್ರಾಮ ಭವನದಲ್ಲಿ ಡಿಸೆಂಬರ್ 30ರಂದು ನಡೆಯಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮೀ ಪಾಟೀಲ್ ಹೇಳಿದರು. ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಎರಡು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದ್ದು ಐದರಿಂದ ಏಳನೇ ತರಗತಿಯ ಹಿರಿಯ ವಿಭಾಗದಲ್ಲಿ ಒಟ್ಟು 16 ಸ್ಪರ್ಧೆಗಳು ಮತ್ತು ಎಂಟರಿಂದ ಹನ್ನೆರಡನೇ ತರಗತಿಯ ಪ್ರೌಢ ವಿಭಾಗದಲ್ಲಿ 21 ಸ್ಪರ್ಧೆಗಳು ನಡೆಯಲಿವೆ. 240 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಎಲ್ಲಾ ಇಲಾಖೆಗಳ ಸಹಯೋಗದಲ್ಲಿ ಹಾಗೂ ಶಿಕ್ಷಣ ಇಲಾಖೆಯ ಎಲ್ಲಾ ಸಂಘಗಳ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು. ಹಿರಿಯ ಉಪನ್ಯಾಸಕ ಮತ್ತು ಉಪನ್ಯಾಸಕರ ಸಂಘದ ಅಧ್ಯಕ್ಷ ಮಹೇಶ ನಾಯಕ, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಮಂಜುನಾಥ ನಾಯಕ, ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿಗಳು ಭಾಸ್ಕರ ಗಾಂವಕರ, ಬಿ.ಆರ್.ಸಿ ಸಮನ್ವಯಾಧಿಕಾರಿಗಳು ದೇವರಾಯ ನಾಯಕ, ಶಿಕ್ಷಕರಾದ ಜಗದೀಶ ನಾಯಕ, ಸುಧೀರ ನಾಯಕ, ಗಣಪತಿ ನಾಯಕ, ಪ್ರಶಾಂತ ನಾಯ್ಕ್, ರಾಜೇಶ್ ನಾಯ್ಕ ಮತ್ತಿತರು ಇದ್ದರು.