ಕಾರವಾರ: ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಇಂದು ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಸಂಜೆ 4.50ಕ್ಕೆ ದಾಬೋಲಿಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಬಳಿಕ ರಸ್ತೆ ಮೂಲಕ ಪ್ರಯಾಣಿಸಿ ಸಂಜೆ 6.30ಕ್ಕೆ ಉತ್ತರ ಕನ್ನಡ ಜಿಲ್ಲೆಯ ಕಾರವಾರಕ್ಕೆ ತಲುಪಲಿದ್ದಾರೆ. ಸಂಜೆ 7 ಗಂಟೆಗೆ ಕಾರವಾರದ ರವೀಂದ್ರನಾಥ ಟಾಗೋರ್ ಕಡಲ ತೀರದಲ್ಲಿ ನಡೆಯುವ “ಕರಾವಳಿ ಉತ್ಸವ” ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಭಾಗವಹಿಸಲಿದ್ದಾರೆ.ಉಪಮುಖ್ಯಮಂತ್ರಿಗಳ ಪ್ರವಾಸದ ಹಿನ್ನೆಲೆಯಲ್ಲಿ ಭದ್ರತೆ, ಸ್ವಾಗತ ಮತ್ತು ಸಾರಿಗೆ ವ್ಯವಸ್ಥೆಗಳನ್ನು ಸಂಬಂಧಿಸಿದ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕೈಗೊಂಡಿವೆ. ಶಾಸಕ ಸತೀಶ್ ಸೈಲ್ ಅಧ್ಯಕ್ಷತೆಯಲ್ಲಿ ಕಳೆದ ಒಂದು ವಾರದಿಂದ ಕರಾವಳಿ ಉತ್ಸವ ಅದ್ದೂರಿಯಾಗಿ ನಡೆಯುತ್ತಿದ್ದು, ಪ್ರಖ್ಯಾತ ತಾರಾಗಣ ವೇದಿಕೆಯಲ್ಲಿ ಮಿಂಚಿದ್ದು ಈ ದಿನ ಖ್ಯಾತ ಸಿಂಗರ್ ದಲೇರ್ ಮೆಂಹದಿ ಕರಾವಳಿಗರಿಗೆ ರಸದೌತಣ ನೀಡಲಿದ್ದಾರೆ. ಅದೇ ದಿನ ಡಿಸಿಎಂ ಡಿಕೆಶಿ ಆಗಮನ ಸಮಾರೋಪ ಸಮಾರಂಭದ ಕಳೆ ಹೆಚ್ಚಿಸಲಿದ್ದು, ಒಂದೊಮ್ಮೆ ಡಿಕೆಶಿ ಅವರು ಇಲ್ಲಿಯೇ ವಾಸ್ತವ್ಯ ಮಾಡಿದರೆ, ಅಂಕೋಲಾ ತಾಲೂಕಿನ ಮಂಜಗುಣಿ -ಗಂಗಾವಳಿ ಸೇತುವೆ ಉದ್ಘಾಟಿಸಬಹುದೇ ಎಂದು ಹಲವರು ಕಾತುರದಿಂದ ಕಾಯುವಂತಾಗಿದೆ.