ಹೊನ್ನಾವರ: ಈಜಾಡುತ್ತಿರುವಾಗ ಸಮುದ್ರದ ಸುಳಿಯಲ್ಲಿ ಸಿಲುಕಿ ಒಂದೇ ಕುಟುಂಬದ ಇಬ್ಬರು ಬಾಲಕರು ಸಾವನಪ್ಪಿದ ದಾರುಣ ಘಟನೆ ತಾಲ್ಲೂಕಿನ ಮಂಕಿ ಮಡಿಯಲ್ಲಿ ಸಂಭವಿಸಿದೆ.
ಸುಜನ್ ನಾರಾಯಣ ಖಾರ್ವಿ(15) ಮತ್ತು ಆತನ ಅಣ್ಣ ಮದನ್ ನಾರಾಯಣ ಖಾರ್ವಿ(17) ಮೃತರು. ಗುರುವಾರ ಸಂಜೆ ಸಮೀಪದ ಅರಬ್ಬಿ ಸಮುದ್ರದಲ್ಲಿ ಈಜಾಡಲು ತೆರಳಿದಾಗ ಏಕಾಏಕಿ ಸಮುದ್ರದ ಸುಳಿಗೆ ಸಿಲುಕಿದ ಸಹೋದನನ್ನು ರಕ್ಷಿಸಲು ಇನ್ನೊಬ್ಬ ಸಹೋದರ ಮುಂದಾಗಿದ್ದಾನೆ. ಸುಳಿಯ ರಭಸಕ್ಕೆ ಇಬ್ಬರೂ ಸಿಲುಕಿಕೊಂಡು ನಾಪತ್ತೆಯಾದರೂ ಎನ್ನಲಾಗಿದೆ. ಅವರ ಪತ್ತೆಗೆ ತೀವ್ರ ಶೋಧ ನಡೆಸಿದ್ದು ತಡರಾತ್ರಿ ಇಬ್ಬರ ಮೃತದೇಹ ಪತ್ತೆಯಾಯಿತು ಎಂದು ಮೂಲಗಳು ತಿಳಿಸಿದೆ. ಪ್ರತಿನಿತ್ಯದಂತೆ ಸಹೋದರರಿಬ್ಬರು ಸಂಜೆ ಸ್ನೇಹಿತರೊಂದಿಗೆ ಕಬ್ಬಡ್ಡಿ ಆಟವನ್ನು ಆಡಿಕೊಂಡು ನಂತರ ಸಮುದ್ರಕ್ಕೆ ಈಜಲು ಹೋಗಿದ್ದರು. ಮೃತರಲ್ಲಿ ಸುಜನ ಖಾರ್ವಿ 9ನೇ ತರಗತಿ ಓದುತ್ತಿದ್ದು, ಸಹೋದರ ಕಾಲೇಜು ವಿದ್ಯಾರ್ಥಿಯಾಗಿದ್ದ. ನಾರಾಯಣ ದಂಪತಿಗಳಿಗೆ ಮೂವರು ಗಂಡು ಮಕ್ಕಳಿದ್ದು ಓರ್ವ ಬಾಲ್ಯದಿಂದ ಅಂಗವೈಕಲ್ಯಕ್ಕೆ ತುತ್ತಾಗಿದ್ದು ಈಗ ಇಬ್ಬರೂ ಮಕ್ಕಳನ್ನು ಕಳೆದುಕೊಂಡು ಕುಟುಂಬದಲ್ಲಿ ದುಃಖದ ಛಾಯೆ ಆವರಿಸಿದೆ.