ಅಂಕೋಲಾ: ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ಸೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಂದಕಕ್ಕೆ ಉರುಳಿ 15ಕ್ಕೂ ಹೆಚ್ಚು ಜನಕ್ಕೆ ಗಾಯಗೊಂಡ ಘಟನೆ ತಾಲ್ಲೂಕಿನ ವಜ್ರಳ್ಳಿಯ ನವಮಿ ಹೋಟೆಲ್ ಬಳಿ ಸಂಭವಿಸಿದೆ.
ಅಂಕೋಲಾ ಘಟಕದ ರಾಯಚೂರು- ಕಾರವಾರ ಮಾರ್ಗದ ಬಸ್ ಅಂಕೋಲಾ ಕಡೆಗೆ ಚಲಿಸುತ್ತಿತ್ತು. ಈ ವೇಳೆ ವೇಗದ ಚಾಲನೆ ಇಲ್ಲವೇ, ರಸ್ತೆಯ ಹೊಂಡಗಳ ಪರಿಣಾಮವೋ ಇಲ್ಲವೇ ಓವರ್ ಟೇಕ್ ಮಾಡುವ ಭರಾಟೆಯಲ್ಲಿ ನಿಯಂತ್ರಣ ತಪ್ಪಿ ಬಸ್ ಪಲ್ಟಿಗೊಂಡಿದೆ ಎನ್ನಲಾಗಿದೆ. ಅಂಕೋಲಾ ಮತ್ತು ಯಲ್ಲಾಪುರ ಪೊಲೀಸರು ಹಾಗೂ ಇತರೆ ಇಲಾಖೆ, ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸಹಕಾರ ನೀಡಿದರು. ಗಾಯಗೊಂಡವರಿಗೆ ಅಂಕೋಲಾ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಮುಂದಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ.
ಇದೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಜೆ ವೇಳೆಯಲ್ಲಿ ಅಂಕೋಲಾ ಕಡೆಗೆ ಬರುತ್ತಿದ್ದ ಬಸ್ ಕೆಲ ದಿನಗಳ ಹಿಂದೆ ಅಪಘಾತಗೊಂಡಿತ್ತು. ವಾರದ ಹಿಂದೆ ಮಿಥೇನಿಯಂ ತುಂಬಿದ ಲಾರಿ ಪಲ್ಟಿಯಾಗಿತ್ತು. ಈ ಹೆದ್ದಾರಿ ಅಪಘಾತಗಳ ರಹದಾರಿ ಎನ್ನುವಂತಾಗಿದೆ. ಸುಮಾರು ಎರಡು ಅಡಿಗಳಷ್ಟು ಆಳದ ಹೊಂಡಗಳಾಗಿದ್ದು ಹೆದ್ದಾರಿ ಸಂಪೂರ್ಣವಾಗಿ ಹಾಳಾಗಿದ್ದರೂ ಜನಪ್ರತಿನಿಧಿಗಳು ಜಿಲ್ಲಾಡಳಿತ ಮತ್ತು ಸಂಬಂಧಿಸಿದ ಇಲಾಖೆಗಳು ಹೆದ್ದಾರಿ ಗುಂಡಿಗಳನ್ನು ಮುಚ್ಚಿಸಿ ದುರಸ್ತಿಗೊಳಿಸುವ ಕಾರ್ಯ ಮಾಡಿಲ್ಲ.