ಅಂಕೋಲಾ: ಕೇಣಿ ವಾಣಿಜ್ಯ ಬಂದರು ನಿರ್ಮಾಣ ವಿರೋಧಿಸಿ ಅಂಕೋಲಾ ಉಳಿಸಿ ಹಾಗೂ ಕೇಣಿ ವಾಣಿಜ್ಯ ಬಂದರು ವಿರೋಧಿ ಸಮಿತಿ ವತಿಯಿಂದ ನಡೆಯುತ್ತಿರುವ ಧರಣಿಯ ಮುಂದುವರೆದ ಭಾಗವಾಗಿ (ಮಂಗಳವಾರ) ನಾಳೆ ಅಂಕೋಲಾ ಬಂದ್ ಗೆ ಕರೆ ನೀಡಲಾಗಿದೆ. ತಾಲ್ಲೂಕಿಗೆ ಮಾರಕವಾದ ಹಾಗೂ ಇಲ್ಲಿನ ಜನಜೀವನಕ್ಕೆ ಕುತ್ತು ತರುವ ಬೃಹತ್ ಯೋಜನೆ ವಿರುದ್ಧ ನಾಳೆ ನಡೆಯಲಿರುವ ಬಂದ್, ಕರಾಳ ದಿನ ಆಚರಣೆ ಹಾಗೂ ಅಣಕು ಶವ ಯಾತ್ರೆಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು ಅಹವಾಲು ಸಭೆಗಿಂತ ಹೆಚ್ಚು ಜನರು ಭಾಗಿಯಾಗುವ ಸಾಧ್ಯತೆ ಇದೆ.
ಟೆಂಪೋ, ಆಟೋ ರಿಕ್ಷಾ, ಟ್ಯಾಕ್ಸಿ ಸಂಘಟನೆಗಳು, ವಕೀಲರ ಸಂಘ, ವರ್ತಕರ ಸಂಘ, ಮೀನು ಮಾರಾಟಗಾರರು, ಪತ್ರಕರ್ತರ ಸಂಘ ಸೇರಿದಂತೆ ಹತ್ತಾರು ಸಂಘಟನೆಗಳು ಬಂದ್ ಗೆ ಬೆಂಬಲ ಸೂಚಿಸಿವೆ. ಬಂದರು ಹೋರಾಟದ ವ್ಯಾಪ್ತಿಯಲ್ಲಿನ ಜನರು ಸ್ವಯಂ ಪ್ರೇರಿತವಾಗಿ ತಮ್ಮ ಮಕ್ಕಳನ್ನು ಶಾಲಾ ಕಾಲೇಜುಗಳಿಗೆ ಕಳುಹಿಸುವುದು ಅನುಮಾನ ಹಾಗೂ ಬಸ್ ಸಂಚಾರ ಇಲ್ಲದ ರಿಕ್ಷಾ ಟೆಂಪೋ ಸಂಚಾರ ಮಾರ್ಗದ ಮೂಲಕ ಆಗಮಿಸುವ ವಿದ್ಯಾರ್ಥಿಗಳಿಗೆ ಅಡಚಣೆ ಉಂಟಾಗುವ ಸಾಧ್ಯತೆ ಇದೆ
ವಹಿವಾಟು ಕುಸಿತವಾಗಿ ಕೆ.ಎಸ್.ಆರ್.ಟಿ.ಸಿ ಬಸ್ ಕೂಡ ನಷ್ಟ ಅನುಭವಿಸುವ ಸಾಧ್ಯತೆಯೂ ಇದೆ. ಸರ್ಕಾರಿ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಣೆ ಮಾಡಿಲ್ಲ. ಬಂದ್ ತೀವ್ರತೆ ಮಂಗಳವಾರ ತಿಳಿದು ಬರಬೇಕಿದೆ.
ನಾಳೆ ಮದ್ಯ ಮಾರಾಟ ನಿಷೇಧ
ಬಂದ್ ಹಿನ್ನಲೆ ಮಂಗಳವಾರ ಬೆಳಿಗ್ಗೆ 06:00 ಗಂಟೆಯಿಂದ ಸಂಜೆ 06:00 ಗಂಟೆಯವರೆಗೆ ಅಂಕೋಲಾ ಪಟ್ಟಣ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮದ್ಯದಂಗಡಿ, ವೈನ್ ಶಾಪ್, ಮತ್ತು ಬಾರ್ ಗಳಲ್ಲಿ ಮದ್ಯ ಮಾರಾಟ/ ಸಾಗಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.