ಗೋಕರ್ಣ: ಇಲ್ಲಿನ ಕುಡ್ಲೇ ಬೀಚ್ ನಲ್ಲಿ ಸಮುದ್ರದ ಅಲೆಗೆ ಸಿಲುಕಿದ ವಿದೇಶೀ ಮಹಿಳೆಯನ್ನು ಜೀವ ರಕ್ಷಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಕಜಕಿಸ್ತಾನ ಮೂಲದ ವಿದೇಶಿ ದಂಪತಿಗಳು ಗೋಕರ್ಣದ ಕುಡ್ಲೇ ಬೀಚಿನಲ್ಲಿ ಈಜಲು ತೆರಳಿದ್ದರು. ಅರಬ್ಬೀ ಸಮುದ್ರದಲ್ಲಿ ಗಾಳಿಯ ಬೀಸುವಿಕೆ ಜೋರಾದ ಪರಿಣಾಮ ದೈತ್ಯಗಾತ್ರದ ಅಲೆಗಳು ಏಳುತ್ತಿವೆ. ಈಜಾಡುತ್ತಿರುವಾಗ ವಿದೇಶಿ ಮಹಿಳೆ ಐದಾಲಿ (25) ಸಮುದ್ರದ ಭಾರೀ ಗಾತ್ರದ ಅಲೆಗೆ ಸಿಲುಕಿದ್ದಾರೆ. ತಕ್ಷಣ ಅಪಾಯದ ಸೂಚನೆ ಅರಿತ ಜೀವರಕ್ಷಕ ಸಿಬ್ಬಂದಿ ಮಂಜುನಾಥ ಹರಿಕಂತ್ರ, ಗಿರೀಶ್ ಗೌಡ ನಾಗೇಂದ್ರ ಕುರ್ಲೆ ಮತ್ತು ಮೈಸ್ಟಿಕ್ ಗೋಕರ್ಣ ಅಡ್ವೆಂಚರ್ ಸಿಬ್ಬಂದಿ ಲಕ್ಷ್ಮಿಕಾಂತ ಹರಿಕಂತ್ರ ವಾಟರ್ ಬೈಕ್ ಮೂಲಕ ರಕ್ಷಣೆಗೆ ತೆರಳಿ ಸುರಕ್ಷಿತವಾಗಿ ಮಹಿಳೆಯನ್ನು ದಡಕ್ಕೆ ಕರೆತಂದರು. ಟೂರಿಸ್ಟ್ ಮಿತ್ರ ಶೇಖರ್ ಹರಿಕಂತ್ರ ಕಾರ್ಯಾಚರಣೆಗೆ ಸಹಕರಿಸಿದರು.