ಅಂಕೋಲಾ: ಸ್ವಾತಂತ್ರ್ಯ ಸಂಗ್ರಾಮದ ಅವಧಿಯಲ್ಲಿ ಕೆಚ್ಚೆದೆಯ ಹೋರಾಟದಿಂದ ಕರ್ನಾಟಕದ ಬಾರ್ಡೋಲಿ ಎನಿಸಿಕೊಂಡಿದ್ದ ಅಂಕೋಲಾದಲ್ಲಿ ಮತ್ತೆ ಮಹಾತ್ಮ ಗಾಂಧಿ ಮಾದರಿಯ ಹೋರಾಟ ಆರಂಭವಾಗಿದೆ. ಇಲ್ಲಿನ ಕೇಣಿಯಲ್ಲಿ ಪ್ರಸ್ತಾಪಿತ ವಾಣಿಜ್ಯ ಬಂದರು ನಿರ್ಮಾಣ ಯೋಜನೆಯನ್ನು ಕೈ ಬಿಡುವಂತೆ ಆಗ್ರಹಿಸಿ ಅಂಕೋಲಾ ಉಳಿಸಿ ಘೋಷಣೆಯೊಂದಿಗೆ ಬಂದರು ವಿರೋಧಿ ಹೋರಾಟ ಸಮಿತಿಯವರು ಅನಿರ್ದಿಷ್ಟ ಅವಧಿ ಧರಣಿ ಮುಂದುವರಿಸಿದ್ದಾರೆ. ಶುಕ್ರವಾರ ಧರಣಿಯ ಮುಂದುವರೆದ ಭಾಗವಾಗಿ ಹಾರವಾಡ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ನಂತರ ಮುಖ್ಯಮಂತ್ರಿ ಅವರಿಗೆ ಪತ್ರದ ಮೂಲಕ ಬಂದರು ನಿರ್ಮಾಣ ಕೈಬಿಡುವಂತೆ ಆಗ್ರಹಿಸಿ ರಕ್ತಮುದ್ರೆಯೊಂದಿಗೆ ಅಂಚೆ ಮೂಲಕ ರವಾನಿಸಿದ್ದಾರೆ. ಗುರುವಾರದಿಂದ ರಕ್ತಪತ್ರ ಚಳುವಳಿ ಆರಂಭವಾಗಿದ್ದು ಬಂದರು ವಿರೋಧದ ಕೂಗು ಇನ್ನಷ್ಟು ಬಲವಾಗುತ್ತಿದೆ.
ಮೀನುಗಾರ ಸಚಿವರಿಗೂ ಪತ್ರ ರವಾನೆ?
ಕರ್ನಾಟಕ ಸರ್ಕಾರದ ಮೀನುಗಾರಿಕಾ ಸಚಿವರು ಮೀನುಗಾರ ಸಮುದಾಯದವರಾದರೂ ಇಲ್ಲಿಯವರೆಗೆ ಹೋರಾಟಗಾರರ ಕೂಗು ಆಲಿಸಿಲ್ಲ. ಜಿಲ್ಲೆಯ ಉಸ್ತುವಾರಿಗಳಾಗಿ ಒಂದು ವರ್ಷದಿಂದ ತೀವ್ರ ಹೋರಾಟ ಆರಂಭವಾದರೂ ತಾಲ್ಲೂಕಿಗೆ ಭೇಟಿ ನೀಡಿ ಜನರ ಅಹವಾಲು ಕೇಳಲಿಲ್ಲ. ಹಾಗಾಗಿ ಮೀನುಗಾರರ ಬದುಕನ್ನು ಕಸಿದುಕೊಳ್ಳುವ ಯೋಜನೆಯನ್ನು ವಿರೋಧಿಸಿ ಕೈ ಬಿಡುವಂತೆ ಆಗ್ರಹಿಸಿ ರಕ್ತ ಚಳುವಳಿಯ ಮುಂದುವರೆದ ಭಾಗವಾಗಿ ಮೀನುಬುಟ್ಟಿಯಲ್ಲಿ ಪತ್ರ ಸಂಗ್ರಹಿಸಿ ಪೋಸ್ಟ್ ಮೂಲಕ ಮೀನುಗಾರಿಕಾ ಸಚಿವರಿಗೆ ರವಾನಿಸಲಾಗುವುದು ಎಂದು ಹೋರಾಟ ಸಮಿತಿಯ ಪ್ರಮುಖರೊಬ್ಬರು ತಿಳಿಸಿದ್ದಾರೆ.