ಗೋಕರ್ಣ: ತದಡಿಯಿಂದ ಅಘನಾಶಿನಿಗೆ ಸಂಚರಿಸುವ ಬಾರ್ಜನಲ್ಲಿ ನಿಗದಿ ದರಕ್ಕಿಂತ ಹೆಚ್ಚು ಹಣವನ್ನ ಪ್ರಯಾಣಿಕರಿಂದ ಪಡೆಯುತ್ತಿದ್ದು, ಹಲವು ವರ್ಷಗಳಿಂದ ನಡೆಯುತ್ತಿರುವ ಈ ಸುಲಿಗೆಯನ್ನ ತಪ್ಪಿಸಿ ದರ ನಿಗದಿಸಿ ಹಾಗೂ ಟಿಕೆಟ್ ನೀಡುವ ವ್ಯವಸ್ಥೆ ಕಲ್ಪಿಸುವಂತೆ ಪ್ರಯಾಣಿಕರು ಆಗ್ರಹಿಸಿದ್ದಾರೆ.
ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆಯವರು ಟೆಂಡರ ಮೂಲಕ ಖಾಸಗಿಯವರಿಗೆ ಇಲಾಖೆಯ ಬಾರ್ಜನ್ನ ಪ್ರಯಾಣಿಕರ ಕರೆದುಕೊಂಡು ಹೋಗಲು ನೀಡಲಾಗಿದೆ. ಪ್ರಯಾಣಿಕರಿಗೆ, ದ್ವಿಚಕ್ರವಾಹನಕ್ಕೆ ಇಲಾಖೆ ನಿಗದಿತ ದರ ಪಟ್ಟಿ ಮಾಡಿದೆ. ಆದರೆ ಇದರ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದು, ಹಗಲು ದರೋಡೆ ಮಾಡುತ್ತಿದ್ದಾರೆ.
ಬೈಕ್‌ಗೆ 10ರೂಪಾಯಿ , ಜನರಿಗೆ 5 ರೂಪಾಯಿ ನಿಗದಿ ಮಾಡಲಾಗಿದೆ. ಆದರೆ ಪ್ರಸ್ತುತ ಬೈಕ್‌ಗೆ 20 ರೂಪಾಯಿ, ಜನರಿಗೆ 10ರೂಪಾಯಿ ಪಡೆಯಲಾಗುತ್ತಿದೆ. ಬಾಡ ಮತ್ತಿತರ ಕಡೆಯಿಂದ ಗೋಕರ್ಣಕ್ಕೆ ಬರುವ ಪ್ರವಾಸಿಗರು ಈ ಮಾರ್ಗವನ್ನ ಅವಲಂಬಿಸಿದ್ದಾರೆ. ಕನ್ನಡ ಮಾತನಾಡುವ ಪ್ರವಾಸಿಗರಿಗೆ ಬೈಕ್‌ಗೆ 4೦ ರೂಪಾಯಿ ವಸೂಲಿ ಮಾಡಲಾಗುತ್ತಿದೆ. ಜನರಿಗೆ 3೦ ರೂಪಾಯಿ ಪಡೆಯುತ್ತಾರೆ. ಅದೇ ಹಿಂದಿ ಮಾತನಾಡುವ ಪ್ರವಾಸಿಗರಾದರೆ ಬೈಕಗೆ 5೦, ಪ್ರಯಾಣಿಕರಿಗೆ 4೦ ರೂಪಾಯಿವರೆಗೂ ವಸೂಲಿ ನಡೆಯುತ್ತಿದೆ ಎನ್ನಲಾಗಿದ್ದು, ವಾರಾಂತ್ಯದ ರಜೆಗೆ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಈ ಭಾಗಕ್ಕೆ ಬರುತ್ತಿದ್ದು, ದೊಡ್ಡ ಪ್ರಮಾಣದಲ್ಲಿ ಸುಲಿಗೆ ನಡೆದಿದೆ ಎಂದು ಜನರು ದೂರುತ್ತಿದ್ದಾರೆ
ದರ ಪಟ್ಟಿಯೂ ಇಲ್ಲ,ಟಿಕೆಟ್ ನೀಡುವುದಿಲ್ಲ:
ತದಡಿ ಮತ್ತು ಅಘನಾಶಿನಿ ಭಾಗದಲ್ಲಿ ಬಾರ್ಜ ಹತ್ತುವ ಪ್ರದೇಶದಲ್ಲಿ ನಿಗದಿ ದರ ಪಟ್ಟಿ ಅಳವಡಿಸಬೇಕು. ಆದರೆ ಇದುವರೆಗೂ ಪ್ರಯಾಣದ ದರ ಪಟ್ಟಿ ಅಳವಡಿಸದೆ ಬಿಡಲಾಗಿದ್ದು, ಇದರಿಂದ ಹೊರಗಿನವರು ಬಾರ್ಜನವರು ಹೇಳಿದಷ್ಟು ಹಣವನ್ನ ನೀಡಿ ತೆರಳುತ್ತಿದ್ದಾರೆ. ಇನ್ನೂ ಪ್ರಯಾಣಿಕರಿಗೆ ಹಣ ನೀಡಿದ್ದಕ್ಕೆ ಟಿಕೆಟ್‌ಸಹ ನೀಡದೆ ಹಾಗೆ ಹಣ ಪಡೆದು ಕಳುಹಿಸುತ್ತಿದ್ದಾರೆ. ಇನ್ನಾದರು ಕೂಡಾ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳ ಬೇಕಿದೆ