ಕಾರವಾರ: ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಗೌರವಾರ್ಥವಾಗಿ ಕಾರವಾರ-ಕೈಗಾ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಶಿರವಾಡ ಗ್ರಾಮದ ರಸ್ತೆಗೆ ನಿರ್ಮಿಸಲಾಗಿದ್ದ 'ಬಂಗಾರಪ್ಪ ನಗರ' ನಾಮಫಲಕದ ಕಮಾನು ನಾಪತ್ತೆಯಾಗಿದ್ದು, ಮಾಜಿ ಮುಖ್ಯಮಂತ್ರಿಗಳ ಅಭಿಮಾನಿಗಳಿಗೆ ತೀವ್ರ ಬೇಸರ ಉಂಟುಮಾಡಿದೆ.
ಹಿಂದುಳಿದ ಹಾಗೂ ಬಡ ವರ್ಗಗಳ ಅಭ್ಯುದಯಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದ, ರೈತರು, ಬಡವರು, ಕೂಲಿ ಕಾರ್ಮಿಕರ ಹಿತಕ್ಕಾಗಿ ಶ್ರಮಿಸಿದ್ದ ಧೀಮಂತ ಎಸ್. ಬಂಗಾರಪ್ಪ ಅವರು 1990ರಿಂದ 1992ರವರೆಗೆ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. 1994ರಲ್ಲಿ ಅವರು ಕಾಂಗ್ರೆಸ್ ಪಕ್ಷ ತೊರೆದು ಕರ್ನಾಟಕ ಕಾಂಗ್ರೆಸ್ ಪಾರ್ಟಿ (ಕೆಸಿಪಿ) ಕಟ್ಟಿದರು. ಆಗ ಕಾರವಾರದಲ್ಲಿ ವಸಂತ ಅಸ್ನೋಟಿಕರ್ ಅವರಿಗೆ ಕೆಸಿಪಿ ಪಕ್ಷದಿಂದ ಟಿಕೆಟ್ ನೀಡಿ ಶಾಸಕರನ್ನಾಗಿ ಆಯ್ಕೆ ಮಾಡಲಾಗಿತ್ತು.
ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಗೌರವಾರ್ಥವಾಗಿ, ಅಂದಿನ ಶಾಸಕ ವಸಂತ ಅಸ್ನೋಟಿಕರ್ ಅವರು 1994ರಲ್ಲಿ ಕಾರವಾರದ ಶಿರವಾಡ ಗ್ರಾಮದ ರಸ್ತೆಗೆ ಕಬ್ಬಿಣದ ಕಮಾನು ನಿರ್ಮಿಸಿ ಬಂಗಾರಪ್ಪ ನಗರ ಎಂದು ನಾಮಕರಣ ಮಾಡಿದರು. ಅಂದಿನಿಂದ ಬಂಗಾರಪ್ಪ ನಗರ ಎಂದೇ ಗುರುತಿಸಿಕೊಂಡಿದೆ. ಈ ಹಿಂದೆ ಆ ನಗರಕ್ಕೆ ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತಿತ್ತು.
ಅಂದು ಕಬ್ಬಿಣದಿಂದ ನಿರ್ಮಿಸಿದ ನಾಮಫಲಕದ ಕಮಾನು ಈಗ ನಾಪತ್ತೆಯಾಗಿದೆ. ಸುಮಾರು ಎರಡು ವರ್ಷಗಳ ಹಿಂದೆ ಸ್ಥಳೀಯ ಹೋಟೆಲ್ ಒಂದಕ್ಕೆ ಕಂಟೇನರ್ ಓಡಾಟಕ್ಕೆ ತೊಂದರೆಯಾದಾಗ ಕಮಾನನ್ನು ತೆರವುಗೊಳಿಸಲಾಗಿತ್ತು. ಬಳಿಕ ಅದನ್ನು ಮತ್ತೆ ನಿರ್ಮಿಸುವುದಾಗಿ ಹೇಳಲಾಗಿದ್ದರೂ, ಇದುವರೆಗೆ ಕಮಾನು ಪುನರ್ ನಿರ್ಮಾಣವಾಗಿಲ್ಲ. ಕಮಾನು ಮಾತ್ರವಲ್ಲದೆ, ಈ ಹಿಂದೆ ಇದ್ದ ಕಂಬಗಳು ಕೂಡ ನಾಪತ್ತೆಯಾಗಿವೆ. ಕಳೆದ 20 ವರ್ಷಗಳಿಂದ ಇದ್ದ ಬಂಗಾರಪ್ಪ ನಗರದ ಕಮಾನು ನಾಪತ್ತೆಯಾಗಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಸಂಬಂಧಪಟ್ಟವರು ಕೂಡಲೇ ಕಮಾನನ್ನು ಪುನಃ ನಿರ್ಮಿಸಲು ಶಿರವಾಡ ಗ್ರಾಮ ಪಂಚಾಯತ್ ನವರು ಕ್ರಮ ಕೈಗೊಳ್ಳಬೇಕೆಂದು ಎಂದು ಅಭಿಮಾನಿಗಳು ಆಗ್ರಹಿಸಿದ್ದಾರೆ