Flash News
Monday, August 31, 2026
Logo Flash News
Monday, August 31, 2026
Logo

ಸಾಕ್ಷ್ಯನಾಶಕ್ಕೆ ಅವಕಾಶ ಹಿನ್ನಲೆ ಸಾಮೂಹಿಕ ರಾಜನಾಮೆ ನೀಡಿದ ಅಂಕೋಲಾ ಪುರಸಭೆಯ ಸದಸ್ಯರು

October 27, 2025   |   Flash News

ಅಂಕೋಲಾ: ಇಲ್ಲಿನ ಪುರಸಭೆಯ ಇತ್ತೀಚಿನ ಕೆಲವು ಬೆಳವಣಿಗೆ ಹಿನ್ನಲೆ ಅಮಾನತ್ ಆಗಿರುವ ಹಿಂದಿನ ಮುಖ್ಯಾಧಿಕಾರಿಗಳ ನೇಮಕ ಮಾಡಿದ್ದಲ್ಲಿ ಸಾಮೂಹಿಕ ರಾಜನಾಮೆ ನೀಡುವುದಾಗಿ ಎಚ್ಚರಿಸಿ ಪುರಸಭೆಯ ಆಡಳಿತ ಮಂಡಳಿ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಸಾಮೂಹಿಕ ರಾಜನಾಮೆ ಪತ್ರ ನೀಡಿದ್ದಾರೆ. ಪತ್ರದ ನಕಲು ಪ್ರತಿಯನ್ನು ಸರ್ಕಾರದ ಮುಖ್ಯಕಾರ್ಯದರ್ಶಿ, ಪೌರಾಡಳಿತ ಇಲಾಖೆಯ ಸಚಿವರು, ನಿರ್ದೇಶಕರು ಮತ್ತು ಜಂಟಿ ನಿರ್ದೇಶಕರು, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾ ನಗರಾಭಿವೃದ್ಧಿ ಕೋಶಕ್ಕೆ ಇಮೇಲ್ ಮೂಲಕ ರವಾನಿಸಿದ್ದಾರೆ.

ಅಂಕೋಲಾ ಪುರಸಭೆಯ ಹಿಂದಿನ ಮುಖ್ಯಾಧಿಕಾರಿ ಎಚ್ ಅಕ್ಷತಾ ಮತ್ತು ಜೆಇ ಶೆಲ್ಜಾ ನಾಯ್ಕ ಅವರು ಹಿಂದಿನಿಂದಲೂ ಆಡಳಿತ ಮಂಡಳಿ ವಿಶ್ವಾಸಗಳಿಸದೆ ಹಲವು ಕಾನೂನುಬಾಹಿರ ಚಟುವಟಿಕೆಗಳನ್ನು ನಿರ್ವಹಿಸಿದ ಹಾಗೂ ಆಡಳಿತ ಮಂಡಳಿಗೆ ಸಹಕರಿಸದ ಕುರಿತು ಸಾಕಷ್ಟು ಬಾರಿ ತಮ್ಮ ಗಮನಕ್ಕೆ ತರಲಾಗಿದೆ. ಅವರ ಕರ್ತವ್ಯ ಲೋಪದ ಕುರಿತು ಈಗಾಗಲೇ ಹಲವು ಬಾರಿ ತನಿಖೆ ನಡೆಸಿ, ಕಾರಣ ಕೇಳಿ ನೋಟಿಸ್ ನೀಡಿ ಸಾಕಷ್ಟು ಕಾಲಾವಕಾಶವನ್ನು ನೀಡಿ ನಂತರ ಕಾನೂನು ಪ್ರಕಾರ ಪುರಸಭೆಯ ನಿಯಮಗಳ ಅನ್ವಯ ಅವರನ್ನು ಅಮಾನತ್ ಮಾಡಲಾಗಿರುತ್ತದೆ. ಯಾವುದೇ ಅಧಿಕಾರಿಯೂ ಕರ್ತವ್ಯ ನಿರ್ವಹಿಸುವ ಸ್ಥಳದಲ್ಲಿಯೇ ಮುಂದುವರೆದರೆ ಸಾಕ್ಷ್ಯ ನಾಶ ಮಾಡುವ ಇಲ್ಲವೇ ಪ್ರಭಾವ ಬೀರುವ ಹಿನ್ನೆಲೆ ಅಮಾನತ್ ಮಾಡಲಾಗುತ್ತದೆ. ಆದರೆ ಅಮಾನತ್ ಆಗಿರುವ ಅಧಿಕಾರಿಗಳು ಕೋರ್ಟ್ ಮೊರೆ ಹೋಗಿ ಆದೇಶಕ್ಕೆ ತಡೆ ತಂದಿದ್ದು ಇಲ್ಲಿಯೇ ಮರು ನಿಯೋಜನೆ ಮಾಡಬೇಕು ಎನ್ನುವ ಕುರಿತು ಸ್ಪಷ್ಟತೆಯಿಲ್ಲ. ಮುಂದುವರೆದು ಇದು ಕೇವಲ ಮಧ್ಯಂತರ ಆದೇಶವಾಗಿದ್ದು ಈಗಾಗಲೇ ಅಮಾನತ್ ಆದೇಶದ ನಂತರ ತಾತ್ಕಾಲಿಕವಾಗಿ ಪ್ರಭಾರಿ ಮುಖ್ಯಾಧಿಕಾರಿ ನಿಯೋಜನೆ ಕೂಡ ಆಗಿದ್ದು, ಉತ್ತಮ ಆಡಳಿತಕ್ಕೆ ಕಾರಣವಾಗಿದೆ. ಹೀಗಿದ್ದೂ ಹಿಂದಿನ ಮುಖ್ಯಾಧಿಕಾರಿ ಎಚ್ ಅಕ್ಷತಾ ಅವರನ್ನೇ ಮತ್ತೆ ಮುಂದುವರೆಸಿದರೆ ಈಗಾಗಲೇ ಅವರ ಮೇಲಿನ ಆರೋಪಗಳು ಕಚೇರಿ ದಾಖಲೆಗೆ ಸಂಬಂಧಿಸಿದ್ದು ಅದರ ಸಾಕ್ಷ್ಯ ನಾಶಕ್ಕೆ ಕಾರಣವಾಗಬಹುದು. ಆಗ ಸರ್ಕಾರದ ಮತ್ತು ಸಾರ್ವಜನಿಕ ಹಣ ದುರುಪಯೋಗಕ್ಕೆ ಆಡಳಿತವೇ ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ. ಹಾಗಾಗಿ ತಾಲ್ಲೂಕಿನ ಜನರ ಹಿತಾಸಕ್ತಿಗೆ ಅವರನ್ನು ನಮ್ಮ ಪುರಸಭೆಗೆ ಮತ್ತೆ ನಿಯೋಜನೆ ಮಾಡಿದರೆ, ಪುರಸಭೆಯ ಸದಸ್ಯರು ಸಾಮೂಹಿಕ ರಾಜನಾಮೆ ನೀಡಲು ತೀರ್ಮಾನಿಸಿದ್ದು, ಇದನ್ನೇ ರಾಜೀನಾಮೆ ಪತ್ರ ಎಂದು ತಿಳಿಯುತ್ತಕ್ಕದ್ದು ಎಂದು ಪತ್ರದಲ್ಲಿ ಹೇಳಿದ್ದಾರೆ. 

ಇಲ್ಲಿನ ಪುರಸಭೆಯ ಮುಖ್ಯಾಧಿಕಾರಿಯಾಗಿದ್ದ ಎಚ್ ಅಕ್ಷತಾ ಕೋರ್ಟ್ ಮೊರೆ ಹೋಗಿದ್ದು ಅವರ ಪ್ರಕರಣದಲ್ಲಿ ಪೌರಾಡಳಿತ ಇಲಾಖೆ, ಜಿಲ್ಲಾ ನಗರಾಭಿವೃದ್ಧಿ ಕೋಶ, ಜಿಲ್ಲಾಡಳಿತ ಮತ್ತು ಅಂಕೋಲಾ ಪುರಸಭೆ ಸಹ ಪ್ರತಿವಾದಿಗಳಾಗಿದ್ದು ಒಂದು ವೇಳೆ ಅವರು ಇಲ್ಲಿಯೇ ಮುಂದುವರೆದರೆ ನ್ಯಾಯಾಲಯದಲ್ಲಿ ಅವರ ವಿರುದ್ಧ ಅವರೇ ವಾದ ಮಾಡಬೇಕಿದ್ದಾಗ ಇದು ನ್ಯಾಯಾಲಯದ ಘನತೆಗೆ ಧಕ್ಕೆಯಾಗಬಹುದು. ಕರ್ತವ್ಯಲೋಪವೂ ಕೂಡ ಸಾಕ್ಷ್ಯನಾಶದ ಕಾರಣದಿಂದ ಮುಚ್ಚಿ ಹೋಗಬಹುದು. ಇದು ಸೂಕ್ತ ಕ್ರಮವಲ್ಲ. ಅಂಕೋಲಾ ಹೊರತುಪಡಿಸಿ ಅವರಿಗೆ ಬೇರೆ ಕಡೆಗಳಲ್ಲಿ ಅವಕಾಶ ಕಲ್ಪಿಸಿದರೆ ನಮ್ಮ ಆಕ್ಷೇಪ ಇಲ್ಲ ಎನ್ನುವುದು ಸದಸ್ಯರ ಅಭಿಪ್ರಾಯ. ಸದಸ್ಯರ ಸಾಮೂಹಿಕ ರಾಜನಾಮೆ ಮೂಲಕ ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ಸಂಚಲನ ಮೂಡಿಸಿದೆ.

 

Recent Flash News
Logo

ಜನಮಾಧ್ಯಮ ಕನ್ನಡದ ನಿಖರ ಸುದ್ದಿ ಮತ್ತು ತಾಜಾ ಮಾಹಿತಿಯ ವಿಶ್ವಾಸಾರ್ಹ ವೇದಿಕೆ. ಇಲ್ಲಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಬೆಳವಣಿಗೆಗಳೊಂದಿಗೆ ಆರ್ಥಿಕ, ಶೈಕ್ಷಣಿಕ ಮತ್ತು ತಂತ್ರಜ್ಞಾನ ಕ್ಷೇತ್ರಗಳ ವಿಶ್ಲೇಷಿತ ಸುದ್ದಿಗಳನ್ನು ಪಡೆಯಬಹುದು. ಜನರಿಗಾಗಿ ಜನರಿಂದ ನಿರ್ಮಿತವಾದ ಈ ಮಾಧ್ಯಮವು ನಿಖರತೆ, ಪಾರದರ್ಶಕತೆ ಮತ್ತು ತ್ವರಿತ ಮಾಹಿತಿ ನೀಡುವುದರಲ್ಲಿ ತನ್ನ ವಿಶೇಷತೆ ಹೊಂದಿದೆ. ಕನ್ನಡ ಸುದ್ದಿಯನ್ನು ನಿಜವಾದ ಅರ್ಥದಲ್ಲಿ ಅನುಭವಿಸಲು ಮತ್ತು ನವೀಕರಿಸಲ್ಪಟ್ಟ ವರದಿಗಳನ್ನು ತಿಳಿದುಕೊಳ್ಳಲು ಜನಮಾಧ್ಯಮ ನಿಮ್ಮ ನಂಬಲರ್ಹ ಮೂಲ.

Tags

National Crime State Flash News Ankola

© 2026 ಜನಮಾಧ್ಯಮ.. All Rights Reserved.