ಅಂಕೋಲಾ: ಸೆಪ್ಟೆಂಬರ್ 22 ರಿಂದ ಆರಂಭವಾಗುವ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ಕಾರ್ಯಕ್ಕೆ ತಾಲೂಕಿನ ಶಿಕ್ಷಕರನ್ನು ಬೇರೆ ತಾಲೂಕಿಗೆ ನಿಯೋಜಿಸುವುದರಿಂದ ಒತ್ತಡ ಹೆಚ್ಚಾಗುತ್ತಿದ್ದು ಇದನ್ನು ಕೈ ಬಿಡಬೇಕೆಂದು ಆಗ್ರಹಿಸಿ ಸಾಂಕೇತಿಕ ಪ್ರತಿಭಟನೆಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ನಿರ್ಧರಿಸಿದೆ.
ಗಣತಿ ಕಾರ್ಯಕ್ಕೆ ಅವರ್ಸಾ ಹಾಗೂ ಭಾವಿಕೇರಿ ಕ್ಲಸ್ಟರ್ ವ್ಯಾಪ್ತಿಯ 77 ಶಿಕ್ಷಕರನ್ನು ಹಾಗೂ ತಾಲೂಕಿನ ಇಬ್ಬರು ಶಿಕ್ಷಕರನ್ನು ಮೇಲ್ವಿಚಾರಕರನ್ನಾಗಿ ಕಾರವಾರ ತಾಲೂಕಿಗೆ ನಿಯೋಜಿಸಿದ್ದು ಸಮಂಜಸವಾಗಿರುವುದಿಲ್ಲ. ಅಲ್ಲದೆ ತಾಲೂಕಿನ ಬೇರೆ ಬೇರೆ ಭಾಗಗಳಿಂದ ಶಿಕ್ಷಕರು ಅವರ್ಸಾ ಹಾಗೂ ಭಾವಿಕೇರಿ ಕ್ಲಸ್ಟರ್ ನ ಗಣತಿ ಕಾರ್ಯವನ್ನು ನಿರ್ವಹಿಸಬೇಕಾದ ಅನಿವಾರ್ಯ ಸಂದರ್ಭ ಒದಗಿ ಬಂದಿರುತ್ತದೆ. ಈಗಾಗಲೇ ಶಿಕ್ಷಕರು ಹಲವು ಕೆಲಸಗಳ ಒತ್ತಡದಿಂದ ಬಳಲುತ್ತಿದ್ದು ತಮಗೆ ಪರಿಚಿತವಲ್ಲದ ಸ್ಥಳಗಳಲ್ಲಿ ಹಲವು ದಿನಗಳ ಕಾಲ ಗಣತಿ ಕಾರ್ಯ ನಡೆಸುವುದು ಪ್ರಯಾಸದಾಯಕವಾಗಿರುತ್ತದೆ. ಬಹುಪಾಲು ಮಹಿಳಾ ಶಿಕ್ಷಕಿಯರೇ ಇರುವುದರಿಂದ ಅವರಿಗೆ ಸಮಸ್ಯೆ ಆಗಲಿದೆ. ಕಾರಣ ಈ ಬಗ್ಗೆ ಮನವಿಯನ್ನು ಸಲ್ಲಿಸಲು ಸಲ್ಲಿಸಲು ಶನಿವಾರ ಶಾಲಾವಧಿಯ ನಂತರ ತಾಲೂಕಿನ ಎಲ್ಲಾ ಶಿಕ್ಷಕರು ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ಸೇರಿಕೊಂಡು ಮೆರವಣಿಗೆಯ ಮೂಲಕ ತಹಶೀಲ್ದಾರರ ಕಾರ್ಯಾಲಯಕ್ಕೆ ತೆರಳಿ ತಹಶೀಲ್ದಾರರಿಗೆ ಮನವಿ ಸಲ್ಲಿಸಲು ತೀರ್ಮಾನಿಸಿದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರದ ಯಾವುದೇ ಸಮೀಕ್ಷೆ ಅಥವಾ ಗಣತಿ ಕಾರ್ಯಾಗಳಿಗೆ ಶಿಕ್ಷಕರನ್ನು ಬಳಸಿಕೊಂಡು ಮಾನಸಿಕ ಒತ್ತಡ ಹೆಚ್ಚುವಂತೆ ಮಾಡಲಾಗುತ್ತಿದೆ. ಶಾಲಾವದಿಯಲ್ಲಿ ಯಾವುದೇ ಕಾರ್ಯಕ್ರಮ ಸಭೆ ಸಮಾರಂಭಗಳಿಗೆ ಅವಕಾಶವಿಲ್ಲವೆಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು ಮಕ್ಕಳ ವಿದ್ಯಾಭ್ಯಾಸದ ದೃಷ್ಟಿಯಿಂದ ಉತ್ತಮ ನಿರ್ಧಾರ ಆಗಿರುತ್ತದೆ ಆದರೆ ಸರ್ಕಾರದ ಇಂತಹ ನಿರ್ಧಾರಗಳಿಂದ ಶೈಕ್ಷಣಿಕ ವಲಯದ ಮೇಲೆ ಋಣಾತ್ಮಕ ಪರಿಣಾಮ ಬೀರಲಿದೆ. ಶಿಕ್ಷಕರು ಕೇವಲ ಪಾಠ ಬೋಧನೆಯಲ್ಲದೇ ಸಾಂಸ್ಕೃತಿಕ, ಕ್ರೀಡೆ ಮತ್ತಿತರ ಚಟುವಟಿಕೆಗಳಲ್ಲಿಯೂ ಪಾಲ್ಗೊಂಡಿರುತ್ತಾರೆ. ಮುಂಬರುವ ಚುನಾವಣೆಯಲ್ಲಿಯೂ ಸಹ ಅವರನ್ನು ಕರ್ತವ್ಯಕ್ಕೆ ನಿಯೋಜಿಸುವ ಕಾರಣ ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತಿದೆ. ಶಿಕ್ಷಣ ಇಲಾಖೆಯ ಸಿಬ್ಬಂದಿಗಳನ್ನು ಅನಗತ್ಯವಾಗಿ ಬಳಸಿಕೊಳ್ಳುವ ಸರ್ಕಾರದ ತೀರ್ಮಾನವು ಅನುಚಿತವಾಗಿದೆ ಎಂದು ನಿವೃತ್ತ ಶಿಕ್ಷಕರೊಬ್ಬರು ಪ್ರತಿಕ್ರಿಯಿಸಿದರು.