ಅಂಕೋಲಾ : ಕಾರಿನ ಚಕ್ರವೊಂದಕ್ಕೆ ಲಾಕ್ ಅಳವಡಿಸುವ ಮೂಲಕ ವಾಹನ ಚಲಾಯಿಸಲಾಗದಂತೆ ಪೊಲೀಸರು ಕಾನೂನು ಕ್ರಮ ಕೈಗೊಂಡ ಘಟನೆ ಪಟ್ಟಣದ ಪ್ರಮುಖ ಸ್ಥಳ ಒಂದರಲ್ಲಿ ನಡೆದಿದ್ದು ಸಾರ್ವಜನಿಕ ವಲಯದಲ್ಲಿ ಕುತೂಹಲ ಮತ್ತು ಚರ್ಚೆ ಹುಟ್ಟುಹಾಕಿದಂತಿದೆ. ತಾಲೂಕಿನ ಸುಂಕಸಾಳ ನಿವಾಸಿ ಸಂದೀಪ ನಾಯ್ಕ ಎನ್ನುವವರ ಮೇಲೆ ಸ್ಥಳೀಯ ನಿವಾಸಿ ಲಕ್ಷ್ಮಣ ಗೌಡ ಎನ್ನುವವರು ಸಲ್ಲಿಸಿದ್ದ ದೂರಿನ ಪ್ರಕರಣಕ್ಕೆ ಸಂಬಂಧಿಸಿದಂತೆ KA 05 MM 6331 ನೊಂದಣಿ ಸಂಖ್ಯೆಯ ಬಿಳಿ ಬಣ್ಣದ ವಾಹನದ ಮುಂಬದಿ ಎಡ ಚಕ್ರಕ್ಕೆ ಲಾಕ್ ಮಾಡಿ ಜಪ್ತು ಮಾಡಲಾಗಿದೆ ಎನ್ನಲಾಗುತ್ತಿದೆ. ಸುಂಕಸಾಳದ ನಿವಾಸಿ ಲಕ್ಷ್ಮಣ ಗೌಡ ಎನ್ನುವವರು ಜೆಸಿಬಿ ಮಾಲಕರಾಗಿದ್ದು, ಅದೇ ಗ್ರಾಮದ ನಿವಾಸಿಯಾಗಿರುವ ಸಂದೀಪ್ ನಾಯ್ಕ ಎನ್ನುವವರಿಗೆ ತಮ್ಮ ಜೆಸಿಬಿ ಮೂಲಕ ಕೆಲಸ ಮಾಡಿಕೊಟ್ಟಿದ್ದು, ತನಗೆ ಬರಬೇಕಾಗಿದ್ದ ಜೆಸಿಬಿ ಬಾಡಿಗೆ ಹಣ ನೀಡುವಂತೆ ಸಂದೀಪ ನಾಯ್ಕ ಅವರ ಮನೆ ಹತ್ತಿರ ಹೋದಾಗ, ಆತನು ಊರಿನ ಹೊಟೇಲ್ ಒಂದರ ಬಳಿ ಹಣ ಕೊಡುತ್ತೇನೆ ಎಂದಾಗ ಸಂದೀಪನ ಕಾರಿನಲ್ಲಿಯೇ ಲಕ್ಷ್ಮಣ ಗೌಡ ಹೋದ ವೇಳೆ ಹೊಟೇಲ್ ಹತ್ತಿರ ಹೋಗುತ್ತಿದ್ದಂತೆ ಹಣಕಾಸಿನ ವಿಚಾರದಲ್ಲಿ ಸಂದೀಪ ನಾಯ್ಕ ಈತನು ಲಕ್ಷ್ಮಣ ಗೌಡನಿಗೆ ಬೈಯ್ದು ನೀನು ತನಗೇನು ಮಾಡುವುದಿದೆ ಎಂದು ಸಿಟ್ಟಿನಲ್ಲಿ ಎದೆಯ ಮೇಲೆ, ಮುಖದ ಮೇಲೆ ಒದ್ದು, ಮೊಬೈಲ್ ನಿಂದ ಮೂಗಿನ ಭಾಗಕ್ಕೆ ಹೊಡೆದು, ತನಗೆ ಗಾಯ ನೋವು ಪಡಿಸಿದ್ದರಿಂದ ತಾನು ತಾಲೂಕಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಪಟ್ಟಿದ್ದು, ತನ್ನ ಮೇಲೆ ಹಲ್ಲೆ ಮಾಡಿದ ಸಂದೀಪ ನಾಯ್ಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಲಕ್ಷ್ಮಣ ಗೌಡ ತಾನು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಪ್ರಕರಣ ದಾಖಲಿಸಿಕೊಂಡ ಅಂಕೋಲಾ ಪೊಲೀಸರು ಆರೋಪಿತನ ವಿರುದ್ಧ ಕಾನೂನು ಕ್ರಮ ಮುಂದುವರಿಸಿದ್ದಾರೆ. ಕಾರಿನ ವೀಲ್ ಲಾಕ್ ಮಾಡಿದ ಬಗ್ಗೆ ಹಾಗೂ ಒಟ್ಟಾರೆ ಪ್ರಕರಣದ ಬಗ್ಗೆ ಮತ್ತಷ್ಟು ಹೆಚ್ಚಿನ ಹಾಗೂ ಅಧಿಕೃತ ಮಾಹಿತಿ ತಿಳಿದು ಬರಬೇಕಿದೆ.