ಯಲ್ಲಾಪುರ: ಅಂಗನವಾಡಿ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಆಲದ ಮರ ಬಿದ್ದು ಗರ್ಭಿಣಿ ಮಹಿಳೆ ಮೃತಪಟ್ಟು ನಾಲ್ವರು ಮಕ್ಕಳಿಗೆ ಗಾಯವಾದ ದುರ್ಘಟನೆ ತಾಲ್ಲೂಕಿನ ಕಿರವತ್ತಿಯ ಡೊಮಗೇರಿ ಬಳಿ ಸಂಭವಿಸಿದೆ. ಸಾವಿತ್ರಿ ಬಾಬು ಖರಾತ್(28) ಮೃತಪಟ್ಟ ಮಹಿಳೆಯಾಗಿದ್ದು ಐದು ತಿಂಗಳ ಗರ್ಭಿಣಿಯಾಗಿದ್ದರು ಎಂದು ತಿಳಿದು ಬಂದಿದೆ. ಸೋಮವಾರ ಸಂಜೆ ಅಂಗನವಾಡಿ ಮುಗಿಸಿ ಮಕ್ಕಳು ಅಂಗನವಾಡಿಯಿಂದ ಮನೆಯತ್ತ ತೆರಳುತ್ತಿದ್ದರು. ಈ ವೇಳೆ ಮರ ಬಿದ್ದಿದೆ. ಸ್ವಾತಿ ಬಾಬು ಖರಾತ್(17), ಘಾಟು ಲಕ್ಕು ಕೊಕರೆ (5.3),ಶ್ರಾವಣಿ ಬಾಬು ಖರಾತ್(2.1) ಹಾಗು ಶಾಂಭವಿ ಬಾಬು ಖರಾತ್(4)ಗಾಯಗೊಂಡವರು. ಗಾಯಗೊಂಡ ನಾಲ್ವರನ್ನು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರು ಮಕ್ಕಳು ಅವಗಡದಿಂದ ಪಾರಾಗಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಕಾರವಾರದಲ್ಲಿಯೂ ಕಾರಿನ ಮೇಲೆ ಮರ ಬಿದ್ದು ಗರ್ಭಿಣಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ನಂತರ ಪಟ್ಟಣದ ಅಪಾಯಕಾರಿ ಮರಗಳನ್ನು ಜಿಲ್ಲಾ ಆಡಳಿತ ತೆರೆವುಗಳಿಸಿತ್ತು. ಜಿಲ್ಲೆಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳನ್ನು ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಂಚರಿಸುವ ರಸ್ತೆಯಲ್ಲಿ ಅಪಾಯಕಾರಿ ಸನ್ನಿವೇಶ ಸೃಷ್ಟಿಸಿರುವ ಮರದ ಟೊಂಗೆಗಳನ್ನು ಕತ್ತರಿಸುವಂತೆ ಸಾರ್ವಜನಿಕರು ಆಗ್ರಹಿಸುತ್ತಾ ಬಂದಿದ್ದಾರೆ.