ಕಾರವಾರ: ಅರಬ್ಬಿ ಸಮುದ್ರದಲ್ಲಿ ಚಂಡಮಾರುತದ ಪರಿಣಾಮ ಉಂಟಾದ ಅಲೆಗಳ ಅಬ್ಬರದಿಂದ ಕಡಲತೀರಕ್ಕೆ ಬಂದು ಸಿಲುಕ್ಕಿದ್ದ ಇಂಡೋ-ಪೆಸಿಫಿಕ್ ಹಂಪ್ಬ್ಯಾಕ್ ತಳಿಯ ಡಾಲ್ಫಿನ್ ಮರಿ ಕಾರವಾರ ತಾಲೂಕಿನ ದೇವಬಾಗ ಕಡಲತೀರಕ್ಕೆ ಸೋಮವಾರ 12.3೦ ರ ಸುಮಾರು ರಕ್ಷಣೆ ಮಾಡಲಾಗಿದೆ. ಸಮುದ್ರಕ್ಕೆ ಹಿಂತಿರುಗಲು ಡಾಲ್ಫಿನ್ ಒದ್ದಾಡುತ್ತಿರುವುದು ಕಂಡು ಬಂದಾಗ, ಅಲ್ಲಿದ್ದ ಜಂಗಲ್ ಲಾಡ್ಜಸ್ ಆ್ಯಂಡ್ ರೆಸಾರ್ಟ್ ಸಿಬ್ಬಂದಿ ತಕ್ಷಣ ಧಾವಿಸಿ ಪ್ರಾಣವನ್ನು ಉಳಿಸುವ ಕಾರ್ಯ ಕೈಗೊಂಡರು.
ಸಮುದ್ರತೀರದಲ್ಲಿ ಅಲೆಗಳ ರಭಸಕ್ಕೆ ಸಿಲುಕಿದ ಡಾಲ್ಫಿನ್ ಮರಳಿ ಸಾಗರದತ್ತ ಹೋಗಲು ಸಾಧ್ಯವಾಗದೇ ಅಸಹಾಯ ಸ್ಥಿತಿಯಲ್ಲಿ ತಿರುಗಾಡುತ್ತಿತ್ತು. ಸ್ಥಳೀಯರು ಇದನ್ನು ಗಮನಿಸಿ ತಕ್ಷಣ ರೆಸಾರ್ಟ್ ಸಿಬ್ಬಂದಿಗೆ ಮಾಹಿತಿ ನೀಡಿದರು. ನಂತರ ಸ್ಥಳಕ್ಕಾಗಮಿಸಿದ ಸಿಬ್ಬಂದಿಗಳಾದ ನೀಲೇಶ್, ಸುನೀಲ್ ಮತ್ತು ಸಂತೋಷ್ ಶ್ರಮಪಟ್ಟು ಡಾಲ್ಫಿನ್ ಸುರಕ್ಷಿತವಾಗಿ ಸಮುದ್ರಕ್ಕೆ ಬಿಡುವಲ್ಲಿ ಯಶಸ್ವಿಯಾದರು